ಅರೆ ಕಾಲಿಕ ಕಾನೂನು ಸ್ವಯಂಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Correspondent/Chikkaballapura/Krishnappa/SM News Desk

Sep 26, 2025 - 15:55
 0  8
ಅರೆ ಕಾಲಿಕ ಕಾನೂನು ಸ್ವಯಂಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ, ಸೆ 24: ಜನರ ಸಮಸ್ಯೆಗಳನ್ನು ತಿಳಿಯಲು ಮತ್ತು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ, ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ರಾಜ್ಯದ ಎಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅರೆ ಕಾಲಿಕ ಸ್ವಯಂ ಸೇವಕರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ನ್ಯಾಯಮೂರ್ತಿ ಶಶಿಧರ್ ಶೆಟ್ಟಿ ರವರು ತಿಳಿಸಿದರು.

ಮಕ್ಕಳು ಕಳೆದು ಹೋದಾಗ ತಕ್ಷಣ ಮಾಹಿತಿ ಬಂದರೆ ಮಕ್ಕಳ ಕಲ್ಯಾಣ ಇಲಾಖೆಗೆ ಹಾಗೂ ಪೊಲೀಸ್ ಇಲಾಖೆಗಳಿಂದ ಸಹಾಯವನ್ನು ಪಡೆದು ಮಕ್ಕಳನ್ನು ಪತ್ತೆ ಹಚ್ಚಬೇಕೆಂಬ ಮಾಹಿತಿ ಕೆಲವರಲ್ಲಿ ಇಲ್ಲ. ರೈತರು ತಮಗೆ ಕಾನೂನಿನ ಸಮಸ್ಯೆಯಾದಾಗ ಯಾವ ರೀತಿ ನ್ಯಾಯ ಪಡೆದುಕೊಳ್ಳಬೇಕೆಂಬ ಸಮಸ್ಯೆಯನ್ನು ಕೆಲವರು ಎದುರಿಸುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಮಾನಸಿಕ ಅಸ್ವಸ್ಥರನ್ನು ಮನೆಯಲ್ಲಿ ಕೂಡಿ ಹಾಕಿರುತ್ತಾರೆ. ಬಹಳಷ್ಟು ಹಳ್ಳಿಯ ಜನರಿಗೆ ಅವರು ಎಲ್ಲಿ ಹೋಗಿ ಮಾಹಿತಿ ಪಡೆಯಬೇಕು ಎನ್ನುವ ಅರಿವು ಇರುವುದಿಲ್ಲ. ಈ ಅರಿವು ಕೆಲಸವನ್ನು ಅರೆ ಕಾಲಿಕ ಕಾನೂನು ಸ್ವಯಂ ಸೇವಕರು ಮಾಡಬೇಕು. ಸರ್ಕಾರದ ಯೋಜನೆಗಳ ಜೊತೆಗೆ ಕಾನೂನು ಅರಿವು ನೆರವಿನ ಮಾಹಿತಿ ಜನರಿಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ.

ಹಳ್ಳಿಯಲ್ಲಿ ಇನ್ನೂ ಕೆಲವು ಕಡೆ ಅಲ್ಲಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಅವುಗಳ ಮಾಹಿತಿಯನ್ನು ನಮ್ಮ ಸ್ವಯಂ ಸೇವಕರಿಂದ ಪಡೆದು ಅವುಗಳನ್ನು ನಿಲ್ಲಿಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನೇರವಾಗಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ತಲುಪಿಸುವ ಉದ್ದೇಶದಿಂದ ನೊಂದವರನ್ನು ನೇರವಾಗಿ ಭೇಟಿಯಾಗಿ ವಿವಿಧ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪತ್ರಕರ್ತರು, ನಿವೃತ್ತ ನೌಕರರು, ಕೆಲವು ಎನ್.ಜಿ.ಓ ಸದಸ್ಯರು, ನಿವೃತ್ತ ಶಿಕ್ಷಕರು, ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರನ್ನು ಸೇರಿದಂತೆ ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳನ್ನು ಅರೆ ಕಾಲಿಕ ಕಾನೂನು ಸ್ವಯಂ ಸೇವಕರನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸೇವಾ ಮನೋಭಾವವುಳ್ಳ ಕಾರ್ಯಗಳ ಬಗ್ಗೆ ಆಸಕ್ತಿ ಹೊಂದಿದವರು ಸ್ವಯಂ ಇಚ್ಚೆಯಿಂದ ಅರೆ ಕಾನೂನು ಸ್ವಯಂ ಸೇವಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಅರೆ ಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಸಕ್ತರು ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ಸಲ್ಲಿಸಬಹುದು ಎಂದು    ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಿಲ್ಪ.ಬಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.