ಶಿಥಿಲ ಕಟ್ಟಡಗಳ ಮಾಲೀಕರಿಗೆ ನೋಟಿಸ್‌‍ ಜಾರಿ...!? ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್‌

Correspondent/GBA/Bengaluru/SM News Desk

May 7, 2026 - 16:15
May 7, 2026 - 17:12
 0  13
ಶಿಥಿಲ ಕಟ್ಟಡಗಳ ಮಾಲೀಕರಿಗೆ ನೋಟಿಸ್‌‍ ಜಾರಿ...!?  ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್‌

ಬೆಂಗಳೂರು, ಮೇ 7:   ರಾಜಧಾನಿ ಬೆಂಗಳೂರುನಲ್ಲಿ ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಕುಸಿಯುವ ಆತಂಕ ಹೆಚ್ಚಾಗಿರುವುದರಿಂದ  ಮಾಲೀಕರುಗಳಿಗೆ ಜಿಬಿಎ ನೋಟೀಸ್‌‍ ಜಾರಿ ಮಾಡಲು ತೀರ್ಮಾನಿಸಿದೆ. ಕಳೆದ ವರ್ಷದ ಮಳೆಗಾಲದಲ್ಲೇ ಐದಕ್ಕೂ ಹೆಚ್ಚು ಹಳೆಯ ಕಟ್ಟಡಗಳು ಕುಸಿದ ಘಟನೆಗಳು ಸಂಭವಿಸಿದ್ದವು. ಇದೇ ರೀತಿಯ ಅನಾಹುತಗಳು ಈ ಬಾರಿ ಮರುಕಳಿಸಬಾರದು ಎಂಬ ಉದ್ದೇಶದಿಂದ ನಗರಪಾಲಿಕೆಗಳು ಶಿಥಿಲ ಕಟ್ಟಡಗಳ ಮಾಲೀಕರಿಗೆ ನೋಟಿಸ್‌‍ ಜಾರಿ ಮಾಡುತ್ತಿದೆ.

ನಗರದಲ್ಲಿ ವಾಸಿಸುವ ನಾಗರಿಕರು ತಮ್ಮ ಸುತ್ತಮುತ್ತ ಇರುವ ಹಳೆಯ ಕಟ್ಟಡಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ. ಇಂತಹ ಅಪಾಯಕಾರಿಯಾದ ಕಟ್ಟಡಗಳು ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಬೇಕು. ಕಳೆದ ವಾರ ಸುರಿದ ಭಾರೀ ಮಳೆಗೆ ಬೌರಿಂಗ್‌ ಆಸ್ಪತ್ರೆಯ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು.ಈ ಘಟನೆ ಬಳಿಕ ಜಿಬಿಎ ಮುಖ್ಯ ಆಯುಕ್ತರು ಐದು ನಗರಪಾಲಿಕೆಗಳ ಆಯುಕ್ತರಿಗೆ ತುರ್ತು ಸೂಚನೆ ನೀಡಿ, ತಮ್ಮ ವ್ಯಾಪ್ತಿಯಲ್ಲಿರುವ ಶಿಥಿಲಾವಸ್ಥೆಯ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿ ಮಾಲೀಕರಿಗೆ ನೋಟಿಸ್‌‍ ನೀಡುವಂತೆ ಆದೇಶಿಸಿದ್ದಾರೆ.

ಪ್ರಸ್ತುತ ನಗರದಲ್ಲಿ ಸುಮಾರು 350ಕ್ಕೂ ಹೆಚ್ಚು ಅಪಾಯಕಾರಿಯಾದ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈಗಾಗಲೇ 15 ಕಟ್ಟಡಗಳ ಕಾಂಪೌಂಡ್‌ ತೆರವುಗೊಳಿಸಲಾಗಿದೆ. ಉಳಿದ ಕಟ್ಟಡಗಳ ಮಾಲೀಕರಿಗೆ ತಕ್ಷಣವೇ ಸ್ವಯಂಪ್ರೇರಿತವಾಗಿ ಕಟ್ಟಡಗಳನ್ನು ಧ್ವಂಸಗೊಳಿಸಲು ಸೂಚಿಸಲಾಗಿದೆ.ಇಲ್ಲವಾದಲ್ಲಿ ನಗರಪಾಲಿಕೆಯೇ ಕಟ್ಟಡ ತೆರವುಗೊಳಿಸಿ ಅದರ ವೆಚ್ಚವನ್ನು ಮಾಲೀಕರಿಂದ ವಸೂಲು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ನಗರಪಾಲಿಕೆವಾರು ಶಿಥಿಲ ಕಟ್ಟಡಗಳ ವಿವರ ಹೀಗಿದೆ:

ಪೂರ್ವ ನಗರಪಾಲಿಕೆ 51 ಕಟ್ಟಡಗಳು
ಪಶ್ಚಿಮ ನಗರಪಾಲಿಕೆ 60 ಕಟ್ಟಡಗಳು
ದಕ್ಷಿಣ ನಗರಪಾಲಿಕೆ 106 ಕಟ್ಟಡಗಳು
ಉತ್ತರ ನಗರಪಾಲಿಕೆ 84 ಕಟ್ಟಡಗಳು
ಕೇಂದ್ರ ನಗರಪಾಲಿಕೆ 49 ಕಟ್ಟಡಗಳು

ಈ ಕಟ್ಟಡಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಜೊತೆಗೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕೆಲವು ಕಟ್ಟಡಗಳೂ ಸೇರಿವೆ.ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ನಗರಪಾಲಿಕೆ ಕಟ್ಟಡಗಳ ತೆರವಿಗೆ ಕ್ರಮ ಕೈಗೊಂಡಿದೆ.ಕಟ್ಟಡ ಮಾಲೀಕರು ಸಹ ಜವಾಬ್ದಾರಿತನದಿಂದ ನಡೆದುಕೊಂಡು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಜೀವಹಾನಿಯನ್ನು ತಪ್ಪಿಸಲು ಸಹಕರಿಸಬೇಕೆಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಮನವಿ ಮಾಡಿದ್ದಾರೆ.