ಮೈಸೂರು ದಸರಾ ವೀಕ್ಷಣೆಗೆ ಕೆಎಸ್‌‍ಆರ್‌ಟಿಯಿಂದ 3000 ವಿಶೇಷ ಬಸ್‌‍ ವ್ಯವಸ್ಥೆ

Correspondent/Mysore/SM News Desk

Oct 10, 2026 - 13:39
 0  9
ಮೈಸೂರು ದಸರಾ ವೀಕ್ಷಣೆಗೆ ಕೆಎಸ್‌‍ಆರ್‌ಟಿಯಿಂದ 3000 ವಿಶೇಷ ಬಸ್‌‍ ವ್ಯವಸ್ಥೆ

ಬೆಂಗಳೂರು,ಅ.10 :  ದಸರಾ ವೀಕ್ಷಣೆಗೆ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ಮೈಸೂರಿಗೆ ಬರುವ ಪ್ರವಾಸಿಗರ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮವು 3000 ವಿಶೇಷ ಬಸ್‌‍ ವ್ಯವಸ್ಥೆಯನ್ನು ಕಲ್ಪಿಸಲಿದೆ.

ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿರುವ ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್‌, ಐರಾವತ, ಐರಾವತ ಕ್ಲಬ್‌ಕ್ಲಾಸ್‌‍ ಹಾಗೂ ಅಂಬಾರಿ ಕ್ಲಬ್‌ಕ್ಲಾಸ್‌‍, ಪಲ್ಲಕ್ಕಿ ಸ್ಲೀಪರ್‌, ಅಶ್ವಮೇಧ ಬಸ್‌‍ ಸೇವೆ ಜೊತೆಗೆ ಹೆಚ್ಚುವರಿಯಾಗಿ 3,000 ಬಸ್‌‍ಗಳ ವಿಶೇಷ ಸಾರಿಗೆ ಸೇವೆಯನ್ನು ಒದಗಿಸಲಿದೆ. ದಸರಾ ಹಿನ್ನೆಲೆಯಲ್ಲಿ ಅ.16ರಿಂದ ಅ.20ರವರೆಗೆ ಬೆಂಗಳೂರಿನಿಂದ ರಾಜ್ಯ, ಅಂತಾರಾಜ್ಯದ ವಿವಿಧ ಸ್ಥಳಗಳಿಗೆ ಈ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌‍ಆರ್‌ಟಿಸಿ ತಿಳಿಸಿದೆ.

ಕೆಂಪೇಗೌಡ ಬಸ್‌‍ ನಿಲ್ದಾಣ, ಮೈಸೂರು ರಸ್ತೆ ಬಸ್‌‍ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್‌‍ ನಿಲ್ದಾಣದಿಂದ ವಿಶೇಷ ಬಸ್‌‍ಗಳ ಸೇವೆ ದೊರೆಯಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿಜಯನಗರ, ಯಶವಂತಪುರ, ಜಯನಗರ, ಬಸವೇಶ್ವರನಗರ, ದೊಮಲೂರು ಬನಶಂಕರಿ ಹಾಗೂ ಇತರಬಸ್‌‍ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡಲಾಗುತ್ತದೆ.ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.20-21ರಂದು ಪ್ರಯಾಣಿಕರು ಮರಳಿ ಬರಲು ಅನುಕೂಲವಾಗುವಂತೆ ವಿಶೇಷ ಬಸ್‌‍ ಸೇವೆ ಕಲ್ಪಿಸಲಾಗುವುದು ಎಂದು ಕೆಎಸ್‌‍ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಧರ್ಮಸ್ಥಳ, ಕುಕ್ಕೆಸುಬ್ರಹಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಲ್ಲಿನ ಹೈದರಾಬಾದ್‌, ವಿಜಯವಾಡ, ನೆಲ್ಲೂರು, ಚೆನ್ನೈ, ಊಟಿ, ಕೊಡೈಕೆನಾಲ್‌, ಸೇಲಂ, ತಿರುಚಿನಾಪಳ್ಳಿ, ಕುಂಭಕೋಣಂ, ಕೊಯಂಬತ್ತೂರು, ಮಧುರೈ, ಪಣಜಿ, ಮಂತ್ರಾಲಯ, ಪೂನಾ, ಎರ್ನಾಕುಲಂ, ಪಾಲಕ್ಕಾಡ್‌ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಬಸ್‌‍ ಸೇವೆ ಕಲ್ಪಿಸಲಾಗುತ್ತಿದೆ.