ಸಿಎಂ ಗೆ ಕಪ್ಪು ಪಟ್ಟಿ ತೋರಿಸಲು ಬೀದಿ ಬದಿ ವ್ಯಾಪಾರಿಗಳ ನಿರ್ಧಾರ:

Correspondent//Anekal/Mallikarjun/SM News Desk

May 21, 2026 - 21:06
 0  4
ಸಿಎಂ ಗೆ ಕಪ್ಪು ಪಟ್ಟಿ ತೋರಿಸಲು ಬೀದಿ ಬದಿ ವ್ಯಾಪಾರಿಗಳ ನಿರ್ಧಾರ:

ಆನೇಕಲ್ ಮೇ,೨೧: ಚಂದಾಪುರದ ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ಒಕ್ಕಲೆಬ್ಬಿಸಿದ ಪುರಸಭೆಯ ಸರ್ವಾಧಿಕಾರಿ ಪ್ರವೃತ್ತಿಯ ವಿರುದ್ಧ ಗುರುವಾರ ಪುರಸಭೆ ಕಛೇರಿ ಎದುರು ಬೀದಿಬದಿ ವ್ಯಾಪಾರಿಗಳು ದಿಡೀರ್ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾಕಾರರ ಅಹವಾಲು ಆಲಿಸಲು ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಮೇ 23ರಂದು ಇಂಡ್ಲವಾಡಿಗೆ ಆಗಮಿಸಲಿರುವ ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಹೋರಾಟ ನಿರತರು ತೀರ್ಮಾನಿಸಿದ್ದಾರೆ. ನಿಯಮಾವಳಿ ಪ್ರಕಾರ ಯಾವುದೇ ಸೂಚನೆ ನೀಡದೆ,  ವ್ಯಾಪಾರಿಗಳನ್ನು ತೆರವುಗೊಳಿಸಿರುವುದು ಅಕ್ಷಮ್ಯ. ಇದರಿಂದ ಭಾರಿ ಪ್ರಮಾಣದ ನಷ್ಟ ಉಂಟಾಗಿದ್ದು ಪುರಸಭೆಯು ಈ ನಷ್ಟವನ್ನು ಭರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಕಚೇರಿಗೆ ಬಾರದ ಸಿಇಒ: ಪುರಸಭೆ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದ ವ್ಯಾಪಾರಿಗಳು ಸಿಇಓ ಸ್ಥಳಕ್ಕೆ ಆಗಮಿಸಿ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿದರೂ, ಇಡೀ ದಿನ ಕಚೇರಿಗೆ ಆಗಮಿಸಲಿಲ್ಲ, ಜೊತೆಗೆ ಹಲವು ಬಾರಿ ಕರೆ ಮಾಡಿದರು ಕರೆ ಸ್ವೀಕರಿಸಲಿಲ್ಲ. ಸಿಇಓ ಅವರ ನಡೆಯನ್ನು ಪ್ರತಿಭಟನಾಕಾರರು ಖಂಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು ಮಳವಳ್ಳಿ 'ಬೀದಿಬದಿ ವ್ಯಾಪಾರಿಗಳ ಕಾಯ್ದೆಯ ಪ್ರಕಾರ ಏಕಾಏಕಿ ತಿರುವುಗಳಿಸುವುದು ಕಾನೂನಿನ ಉಲ್ಲಂಘನೆ, ಇದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ತಿರುವುಗೊಳಿಸುವ ಮುನ್ನ ಪಟ್ಟಣ ವ್ಯಾಪಾರಿಗಳ ಸಂಘದ ಸಭೆಯನ್ನು ಕರೆದು ಎಲ್ಲರ ಅಭಿಪ್ರಾಯ ಪಡೆದು ವ್ಯಾಪಾರಿಗಳು ಒಪ್ಪಿದ್ದಲ್ಲಿ ಮಾತ್ರವೇ ತೆರವು ಮಾಡಬೇಕೆಂದು ಕಾನೂನಿನ ನಿಯಮಾವಳಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ, ನಿಯಮಾವಳಿಗಳನ್ನು ಉಲ್ಲಂಘಿಸಿದ ಪುರಸಭೆಯ ಅಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಮಣಿದು , ಬುಲ್ಡೋಝರ್ ಕಾರ್ಯಾಚರಣೆ ನಡೆಸಿರುವುದು ಅಕ್ಷಮ್ಯ ಅಪರಾಧ, ಇವರನ್ನು ತಕ್ಷಣವೇ ಅಮಾನತು ಮಾಡಬೇಕೆಂದು' ಆಗ್ರಹಿಸಿದರು. 

ಬೀದಿಬದಿ ವ್ಯಾಪಾರಿಗಳ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸಮ್ಮ ಮಾತನಾಡಿ 'ಚಂದಾಪುರದಲ್ಲಿ ಪುರಸಭೆಯವರು ಬೀದಿಬದಿ ವ್ಯಾಪಾರಿಗಳಿಂದ ಸುಂಕ ಸಂಗ್ರಹಿಸುತ್ತಿರುವುದು ಕಾನೂನುಬಾಹಿರ, ಇದನ್ನು ಕೂಡಲೇ ನಿಲ್ಲಿಸಬೇಕು, ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ' ಎಂದರು. 
 ಬೆಂಗಳೂರು ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಮುಖಂಡ ಜಿ.ಪಿ. ಸುನಿಲ್ ಮಾತನಾಡಿ ' ಪುರಸಭೆಯವರು ಬೀದಿಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಜೊತೆ ಮುಂಚಿತವಾಗಿ ಮಾತನಾಡದೆ, ಯಾವ ಮಾಹಿತಿಯನ್ನು ನೀಡದೆ ತೆರವುಗೊಳಿಸಿರುವುದರಿಂದ ವ್ಯಾಪಾರಿಗಳು ನಷ್ಟ ಅನುಭವಿಸಿದ್ದಾರೆ. ಇದಕ್ಕೆ ಪುರಸಭೆಯೇ ನೇರ ಹೊಣೆಯಾಗಿದ್ದು ನಷ್ಟ ಪರಿಹಾರ ತುಂಬಿಕೊಡಬೇಕೆಂದು ಆಗ್ರಹಿಸಿದರು. 
 ಸಿಐಟಿಯು ಆನೇಕಲ್ ತಾಲೂಕು ಸಮಿತಿ ಅಧ್ಯಕ್ಷ ಪಿ. ಸುರೇಶ್ ಇತರರು ಹಾಜರಿದ್ದರು.