2007ರಲ್ಲೇ ಸ್ಥಗಿತಗೊಳಿಸಲಾಗಿದ್ದ ಬಿಡದಿ ಟೌನ್‌ಶಿಪ್‌ಗೆ ಮರುಜೀವ ನೀಡಿದ್ದೇ ಕಾಂಗ್ರೆಸ್ : ಹೆಚ್ಡಿಕೆ
Correspondent/Bengaluru/Political/SM News Desk
ಬೆಂಗಳೂರು,ಜೂ.22 : ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಕಾರ್ಖಾನೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಕಳೆದ 2007ರಲ್ಲೇ ಸ್ಥಗಿತಗೊಳಿಸಲಾಗಿದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಿ 2025ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆಗೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಧರ್ಮಸಿಂಗ್, ಡಿ.ಕೆ.ಶಿವಕುಮಾರ್ ಅವರು 2007ರ ಜುಲೈನಲ್ಲಿ ನಡೆದ ವಿಧಾನಸಭೆ ಕಲಾಪದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ರೈತರನ್ನು ಒಕ್ಕಲೆಬ್ಬಿಸಿ ಟೌನ್‌ಶಿಪ್ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದರು.ಆದರೆ 2025ರಲ್ಲಿ ಬಿಡದಿ ಟೌನ್‌ಶಿಪ್‌ಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 2026ರಲ್ಲಿ ಅಂತಿಮ ಅಧಿಸೂಚನೆಯನ್ನು ಕಾಂಗ್ರೆಸ್ ಸರ್ಕಾರ ಹೊರಡಿಸಿದೆ. ರೈತರ ಪರವಾಗಿ ಡಿನೋಟಿಫಿಕೆಷನ್ ಮಾಡಿದರೆ ಜೈಲಿಗೆ ಹೋಗಬೇಕಾಗಿಲ್ಲ. ಯೋಜನೆಯನ್ನೇ ಕೈಬಿಟ್ಟು ರೈತರ ಹಿತ ಕಾಪಾಡಬಹುದು ಎಂದು ಹೇಳಿದರು.
ಅತ್ಯಂತ ವೇಗವಾಗಿ ಸರ್ಕಾರದಲ್ಲಿ ಬಿಡದಿ ಟೌನ್‌ಶಿಪ್ ವಿಚಾರದ ಬೆಳೆವಣಿಗೆಗಳು ಆಗುತ್ತಿವೆ. ಈ ಟೌನ್‌ಶಿಪ್ ಪಿತಾಮಹ ಎಂದು ನನ್ನನ್ನು ಕರೆದಿದ್ದಾರೆ ಎಂದು ಹೇಳಿ, ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್ ನಾಯಕರು ಟೌನ್‌ಶಿಪ್ ವಿರೋಧಿಸಿ ಮಾಡಿದ್ದ ಭಾಷಣದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದರು.ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಪತನವಾಗಿ ರಾಷ್ಟ್ರಪತಿ ಆಳ್ವಿಕೆ ಬಂದ ಸಂದರ್ಭದಲ್ಲಿ ಸ್ಥಗಿತವಾಗಿದ್ದ ಯೋಜನೆಗೆ ಚಾಲನೆ ನೀಡಲಾಗಿದೆ. 2009ರಲ್ಲಿದ್ದ ಬಿಜೆಪಿ ಸರ್ಕಾರ ಯೋಜನೆ ಸ್ಥಗಿತಗೊಳಿಸಲು ನಿರ್ಧರಿಸಿ ಡಿಎಲ್‌ಎಫ್ ಬಡ್ಡಿ ಸಹಿತ ಹಣ ನೀಡಿದೆ. ಅಲ್ಲಿಗೆ ಈ ಯೋಜನೆ ಮುಕ್ತಾಯಗೊಂಡಿತ್ತು.
2018ರಲ್ಲಿ ನಾನು 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಮುಂದುವರೆಸಬಹುದಿತ್ತು. ಆದರೆ ಆ ಕಾರ್ಯ ಮಾಡಲಿಲ್ಲ. 20 ವರ್ಷಗಳ ನಂತರ ಕಾಂಗ್ರೆಸ್ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದ ಅವರು, ಬೆಂಗಳೂರಿನ ಮಾಸ್ಟರ್ ಪ್ಲಾನ್ ಮಾಡುವಾಗ ರೆಡ್‌ಝೋನ್ ಎಂದು ಗುರುತಿಸಲಾಗಿದೆ ಅಷ್ಟೇ ಎಂದರು.
