ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕುಸಿತ
Correspondent/New Delhi/SM News Desk
ಬೆಂಗಳೂರು, ಮಾ.30 : ಚಿನ್ನದ ದರದಲ್ಲಿ ಮತ್ತೆ ಇಳಿಕೆಯಾಗಿದ್ದು, ಬೆಳ್ಳಿದರದಲ್ಲಿ ಸ್ಥಿರತೆ ಇದೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಪರಿಣಾಮ ಚಿನಿವಾರಪೇಟೆಯ ಮೇಲೂ ಆಗಿದ್ದು, ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತ ಕಂಡುಬರುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಚಿನ್ನದ ದರ ಏರುಗತಿಯಲ್ಲಿ ಸಾಗಿ ಪ್ರತಿ ಗ್ರಾಂಗೆ 20 ಸಾವಿರ ರೂ.ವರೆಗೆ ತಲುಪಬಹುದು ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ, ಏರಿಕೆಯ ಬದಲು ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕುಸಿತ ಉಂಟಾಗಿದ್ದು, ಚಿನಿವಾರ ಪೇಟೆ ತತ್ತರಿಸುವಂತಾಗಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಇಂದು 24 ಕ್ಯಾರಟ್ ಚಿನ್ನ ಒಂದು ಗ್ರಾಂಗೆ 81 ರೂ. ಕಡಿಮೆಯಾಗಿದ್ದು, 14, 728 ರೂ.ಗೆ ಇಳಿದೆ. 22 ಕ್ಯಾರಟ್ ಚಿನ್ನ ಒಂದು ಗ್ರಾಂಗೆ 75 ರೂ. ಕಡಿಮೆಯಾಗಿದ್ದು, 13,500 ರೂ.ಗೆ ಕಡಿಮೆಯಾಗಿದೆ. ಅದೇ ರೀತಿ 18 ಕ್ಯಾರಟ್ ಚಿನ್ನ ಒಂದು ಗ್ರಾಂಗೆ 61 ರೂ. ಕಡಿಮೆಯಾಗಿದ್ದು, 11, 046 ರೂ.ಗೆ ತಲುಪಿದೆ.
ಮಾ.21ರಿಂದ ಸತತ ಇಳಿಕೆಯಾಗಿದ್ದ ಚಿನ್ನವು, ಮಾ.25ರಂದು ಅಲ್ಪ ಪ್ರಮಾಣದ ಚೇತರಿಕೆಯಾಗಿತ್ತು. ಮತ್ತೆ ಕುಸಿತ ಕಂಡ ಚಿನ್ನವು, ಮಾ. 27 ಮತ್ತು ಮಾ.28ರಂದು ನಿರಂತರ ಏರಿಕೆಯಾಗಿತ್ತು. ನಿನ್ನೆ ಸ್ಥಿರವಾಗಿದ್ದ ದರವು ಇಂದು ಕುಸಿತ ಕಂಡಿದೆ. ಇದು ಆಭರಣ ಪ್ರಿಯರು ಹಾಗೂ ಗ್ರಾಹಕರಿಗೆ ಸ್ವಲ್ಪ ಸಮಾಧಾನ ತಂದಿದೆ.
ಬೆಳ್ಳಿ ದರವು ಕಳೆದ ಮೂರು ದಿನಗಳಿಂದ ಸ್ಥಿರವಾಗಿದ್ದು, ಪ್ರತಿ ಗ್ರಾಂಗೆ 245ರೂ. ನಷ್ಟಿದೆ. ಒಂದು ಕೆ.ಜಿ .ಬೆಳ್ಳಿ ದರವು 2.45 ಲಕ್ಷ ರೂ.ನಷ್ಟಿದೆ. ಮಾ. 28ರಿಂದಲೂ ಇದೇ ದರ ಮುಂದುವರೆದಿದೆ. ಮಾ. 24ರಿಂದ ನಿರಂತರ ಏರಿಕೆಯಾಗಿದ್ದ ಬೆಳ್ಳಿ ಮಾ. 27ರಂದು ಪ್ರತಿ ಕೆ.ಜಿ.ಗೆ 10 ಸಾವಿರ ರೂ. ಕಡಿಮೆಯಾಗಿತ್ತು. ಮರು ದಿನವೇ ಐದು ಸಾವಿರ ರೂ. ಏರಿಕೆಯಾಗಿದ್ದು, ನಂತರ ಸ್ಥಿರತೆ ಕಾಯ್ದುಕೊಂಡಿದೆ.
ಜಾಗತಿಕವಾಗಿ ಉಂಟಾಗುವ ಬದಲಾವಣೆಗಳಿಗೆ ಅನುಗುಣವಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲೂ ಏರಿಳಿತವಾಗುವುದು ಸಹಜ ಪ್ರಕ್ರಿಯೆಯಾಗಿದ್ದು, ಸದ್ಯಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಗಳು ವಿರಳ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
