4,500 ಎಲೆಕ್ಟ್ರಿಕ್‌ ಬಸ್‌‍ಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡುತ್ತಿಲ್ಲ : ತೇಜಸ್ವಿ ಸೂರ್ಯ ಆರೋಪ

Correspondent/Bengaluru/SM News Desk

Jun 29, 2026 - 16:01
 0  7
4,500 ಎಲೆಕ್ಟ್ರಿಕ್‌ ಬಸ್‌‍ಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡುತ್ತಿಲ್ಲ : ತೇಜಸ್ವಿ ಸೂರ್ಯ ಆರೋಪ
File Photo/socialmedia.ind.in
4,500 ಎಲೆಕ್ಟ್ರಿಕ್‌ ಬಸ್‌‍ಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡುತ್ತಿಲ್ಲ : ತೇಜಸ್ವಿ ಸೂರ್ಯ ಆರೋಪ

ಬೆಂಗಳೂರು,ಜೂ.29: ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ  ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಮಂಜೂರು ಮಾಡಿರುವ 4,500 ಎಲೆಕ್ಟ್ರಿಕ್‌ ಬಸ್‌‍ಗಳಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಅನುಮೋದನೆ ಮತ್ತು ಬೆಂಬಲ ಸಿಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅವರು, ಈ ಬಸ್‌‍ಗಳನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ತನ್ನ ಪಾಲಿನ ಅತ್ಯಲ್ಪ ಮೊತ್ತದ ಹಣವನ್ನು ಹೂಡಿಕೆ ಮಾಡಬೇಕಿದೆ. ಆದರೆ, ಸಾರ್ವಜನಿಕ ಹಿತಾಸಕ್ತಿಯ ಈ ಯೋಜನೆಗೆ ಒಪ್ಪಿಗೆ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಬಸ್ಸುಗಳ ವಿಳಂಬದ ಕುರಿತು ನಾನು ಈಗಾಗಲೇ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಸಹ ಇದಕ್ಕೆ ಪೂರಕವಾಗಿ ಉತ್ತರಿಸಿದ್ದಾರೆ. ಈ ಸರ್ಕಾರದ ಬಳಿ 1,300 ಕಿಲೋಮೀಟರ್‌ ಹಾಗೂ ಕೇವಲ ಐಷಾರಾಮಿ ಕಾರುಗಳ ಸಂಚಾರಕ್ಕಾಗಿ 2 ಕಿಲೋಮೀಟರ್‌ ಉದ್ದದ ಟನಲ್‌ ರಸ್ತೆಗಳಂತಹ ವಿಐಪಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಲು ಹಣವಿದೆ. ಆದರೆ, ದಿನನಿತ್ಯ ಬಿಎಂಟಿಸಿ ಬಸ್‌‍ ಹಾಗೂ ನಮ ಮೆಟ್ರೋದಲ್ಲಿ ಪ್ರಯಾಣಿಸುವ ಸಾಮಾನ್ಯ ಜನರಿಗಾಗಿ ಖರ್ಚು ಮಾಡಲು ಹಣವಿಲ್ಲವೇ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಪಿಎಂ ಇ-ಬಸ್‌‍ ಸೇವಾ ಯೋಜನೆಯಡಿ ಬೆಂಗಳೂರಿಗೆ 4,500 ಎಲೆಕ್ಟ್ರಿಕ್‌ ಬಸ್‌‍ಗಳನ್ನು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ ಈ ಬಸ್‌‍ಗಳನ್ನು ಪಡೆಯಲು ಅಗತ್ಯವಿರುವ ಆಡಳಿತಾತಕ ಅನುಮೋದನೆಯನ್ನು ನೀಡದೆ ವಿಳಂಬ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.ಬೆಂಗಳೂರಿನಲ್ಲಿ ದಿನೇದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ಸಾರ್ವಜನಿಕ ಸಾರಿಗೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ತಕ್ಷಣವೇ ಈ ಬಸ್‌‍ಗಳನ್ನು ರಸ್ತೆಗಿಳಿಸುವ ಅಗತ್ಯವಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾಗರಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪ್ರೇರಿತ ನಿರ್ಧಾರ: ಬೆಂಗಳೂರಿನ ಅಭಿವೃದ್ಧಿಯ ವಿಷಯದಲ್ಲೂ ರಾಜ್ಯ ಸರ್ಕಾರವು ರಾಜಕೀಯ ಮಾಡುತ್ತಿದ್ದು, ಕೇಂದ್ರದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈಗಾಗಲೇ ಬಸ್‌‍ಗಳ ಕೊರತೆಯನ್ನು ಎದುರಿಸುತ್ತಿದೆ. ಕೇಂದ್ರ ನೀಡಲು ಮುಂದಾಗಿರುವ ಈ 4,500 ಎಲೆಕ್ಟ್ರಿಕ್‌ ಬಸ್‌‍ಗಳು ಕಾರ್ಯರೂಪಕ್ಕೆ ಬಂದರೆ, ನಗರದ ಮಾಲಿನ್ಯವನ್ನು ತಗ್ಗಿಸಲು ಮತ್ತು ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಸುಗಮಗೊಳಿಸಲು ದೊಡ್ಡ ಮಟ್ಟದ ನೆರವಾಗಲಿದೆ. ಆದರೆ ರಾಜ್ಯ ಸರ್ಕಾರದ ಈ ವಿಳಂಬ ಧೋರಣೆಯಿಂದಾಗಿ ಈ ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದು ದೂರಿದರು.

ಈ ಸರ್ಕಾರದ ದೃಷ್ಟಿಯಲ್ಲಿ ಸಾಮಾನ್ಯ ನಾಗರಿಕರು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಇವರಿಗೆ ದಿನಾಲೂ ಬಸ್‌‍ನಲ್ಲಿ ಓಡಾಡುವ ಮಹಿಳೆಯರಾಗಲಿ, ಪಾದಚಾರಿಗಳಾಗಲಿ ಆದ್ಯತೆಯಾಗಿ ಉಳಿದಿಲ್ಲ. ಕಮಿಷನ್‌ ದಂಡು ಹೊಡೆಯಬಹುದಾದ ಬಿಳಿ ಆನೆಯಂತಹ ದೊಡ್ಡ ಯೋಜನೆಗಳ ಬೆನ್ನತ್ತಿರುವ ವಿಐಪಿ ಸರ್ಕಾರ ಇದಾಗಿದೆ ಎಂದು ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದರು.

ಇದೇ ವೇಳೆ ಬೆಂಗಳೂರಿನ ಸ್ಥಳೀಯ ಮೂಲಸೌಕರ್ಯಗಳ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ, ಬನಶಂಕರಿ ಬಿಎಂಟಿಸಿ ಬಸ್‌‍ ನಿಲ್ದಾಣದ ಬಳಿ ಸಾರ್ವಜನಿಕರು ಮತ್ತು ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈವಾಕ್‌ (ಪಾದಚಾರಿ ಮೇಲ್ಸೇತುವೆ) ನಿರ್ಮಾಣ ಮಾಡಲು ಅಂದು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್‌ ಅವರೇ ಸ್ವತಃ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಈಗ ಆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಯಾರೋ ಒಬ್ಬ ಗುತ್ತಿಗೆದಾರನ ಮಾತು ಕೇಳಿ, ಲಾಭದ ಉದ್ದೇಶದಿಂದ ಇಲ್ಲೊಂದು ಫ್ಲೈ ಓವರ್‌ ಮಾಡಲು ಸರ್ಕಾರ ಹೊರಟಿದೆ ಎಂದು ಅವರು ದೂರಿದ್ದಾರೆ.