ಬೀದಿಗಿಳಿದು ಹೋರಾಟ ನಡೆಸಲಾಗುವುದು - ಜಿಬಿಎ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ
Correspondent/GBA/Bengaluru/SM News Desk
ಬೆಂಗಳೂರು, ಮೇ 8 : ಜಿಬಿಎ ರಚನೆಯಾದ ನಂತರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಅಕಾಲಿಕ ಮರಣ ಹೊಂದಿದರೆ ಅವರ ಅವಲಂಬಿತರಿಗೆ ಸಿಗಬೇಕಾದ ಕೆಲಸ ಸಿಗುತ್ತಿಲ್ಲ. ಅನುಕಂಪದ ಆಧಾರದ ಮೇಲೆ ನೌಕರಿ ಮತ್ತು ನಿವೃತ್ತಿ ವೇತನ ಉಪದಾನ ಮತ್ತು ಇನ್ನಿತರ ಆರ್ಥಿಕ ಸೌಲಭ್ಯವನ್ನು ಪಡೆಯದೆ ಹಲವಾರು ಮಂದಿ ವಂಚಿತರಾಗಿದ್ದಾರೆ ಎಂದು ತಿಳಿದುಬಂದಿದೆ.
ಗ್ರೇಟರ್ ಬೆಂಗಳೂರು ರಚನೆಯಾದರೆ ಅದರ ಲಾಭ ನಮಗೂ ಸಿಗುತ್ತದೆ ಎಂದು ನಂಬಿದ್ದ ಪಾಲಿಕೆ ನೌಕರರ ಕನಸು ಭಗ್ನವಾಗಿದೆ.ಲಾಭ ಸಿಗುವುದಿರಲಿ, ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಆಡಳಿತ ಸೌಲಭ್ಯವೂ ಸಿಗದಂತಾಗಿದೆ.ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾದ ದಿನಾಂಕದಿಂದ ಪಾಲಿಕೆ ಅಧಿಕಾರಿ ನೌಕರರಿಗೆ ನಿಗದಿತ ದಿನಾಂಕದೊಳಗೆ ಸಂಬಳ ನೀಡುತ್ತಿಲ್ಲ. ಆರ್ಥಿಕ ಸೌಲಭ್ಯವಾದ ಗಳಿಕೆ ರಜೆ, ವಾರ್ಷಿಕ ವೇತನ ಬಡ್ತಿ, ವೇತನ ಶ್ರೇಣಿ (10,15,20) ವರ್ಷ ಟೈಮ್ ಬಾಂಡ್ ಮತ್ತು ಇನ್ನಿತರ ಆರ್ಥಿಕ ಸೌಲಭ್ಯ ಪಡೆಯಲು ನೌಕರರು ವಿಲರಾಗಿರುತ್ತಾರೆ.ಪಾಲಿಕೆಯ ಅಧಿಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರು ಆರೋಗ್ಯ ಚಿಕಿತ್ಸೆ ಪಡೆದಿರುವ ಬಿಲ್ಲನ್ನು ಆಸ್ಪತ್ರೆಗಳಿಗೆ ಪಾವತಿಸದೆ ಹಾಗೂ ಆಸ್ಪತ್ರೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳದೆ ಇರುವುದರಿಂದ ಪಾಲಿಕೆ ಅಧಿಕಾರಿ ನೌಕರರು ಮತ್ತು ಅವಲಂಬಿತರು ಚಿಕಿತ್ಸೆ ಪಡೆಯಲು ವಿಲರಾಗಿರುತ್ತಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಯಾದ ನಂತರ ಅರ್ಹ ಅಧಿಕಾರಿ ನೌಕರರಿಗೆ ವಸತಿಗೃಹ ಹಂಚಿಕೆಯಲ್ಲಿ ವಿಳಂಬವಾಗಿರುತ್ತದೆ . ಅಧಿಕಾರಿ ನೌಕರರು ಮುಂಬಡ್ತಿಗಳನ್ನು ಸಕಾಲದಲ್ಲಿ ಪಡೆಯದೆ ವಂಚಿತರಾಗಿರುತ್ತಾರೆ, ವೃಂದ ಮತ್ತು ನೇಮಕಾತಿ ನಿಯಮಾವಳಿ ಅಡಿಯಲ್ಲಿ ತಿದ್ದುಪಡಿಯಾಗದೆ ಮುಂಬಡ್ತಿ ನೀಡಲು,ಸೇವಾ ಜೇಷ್ಠತಾ ಪಟ್ಟಿ ಅಂತಿಮಗೊಳಿಸದೆ ವಿಳಂಬವಾಗಿರುತ್ತದೆ ಇದರ ಜೊತೆಗೆ ಪಾಲಿಕೆಯಲ್ಲಿ ಕಾನೂನು ಬಾಹಿರವಾಗಿ ಎರವಲು ಸೇವೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಽಕಾರಿ ನೌಕರರನ್ನು ಮಾತೃಇಲಾಖೆಗೆ ಹಿಂತಿರುಗಿಸಿರುವುದಿಲ್ಲ.
ಸರ್ಕಾರ ನಮ್ಮ ವಿರುದ್ಧ ಇದೇ ರೀತಿಯ ಮಲತಾಯಿ ಧೋರಣೆ ಮುಂದುವರೆಸಿದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಜಿಬಿಎ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಎಚ್ಚರಿಸಿದೆ.
