ಬಿಡದಿ ಟೌನ್‌ಶಿಪ್‌ಗೆ ವಿರೋಧ - ರೈತರೊಂದಿಗೆ ಡಿಕೆಶಿ ಸಮಾಲೋಚನೆ - ಅವೈಜ್ಞಾನಿಕ ಪರಿಹಾರ ,ಕುಮಾರಸ್ವಾಮಿ

Correspondent/Bengaluru/Political/SM News Desk

May 20, 2026 - 22:24
 0  19
ಬಿಡದಿ ಟೌನ್‌ಶಿಪ್‌ಗೆ ವಿರೋಧ  -  ರೈತರೊಂದಿಗೆ ಡಿಕೆಶಿ ಸಮಾಲೋಚನೆ - ಅವೈಜ್ಞಾನಿಕ ಪರಿಹಾರ ,ಕುಮಾರಸ್ವಾಮಿ

ಬೆಂಗಳೂರು, ಮೇ 20 :   18 ಸಾವಿರ ಕೋಟಿ ರೂ.ವೆಚ್ಚದಲ್ಲಿ ಬಿಡದಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಪನಗರ ಯೋಜನೆ ಸಂಬಂಧಪಟ್ಟಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಆ ಭಾಗದ ರೈತರ ಜೊತೆ ಸಮಾಲೋಚನೆ ನಡೆಸಿದರು.ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಇತ್ತೀಚೆಗೆ ರೈತರ ಸಭೆ ನಡೆಸಿ, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಬಿಡದಿ ಟೌನ್‌ಶಿಪ್‌ಗೆ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ರೈತರು ಭೂಮಿ ನೀಡಲು ಹಾಗೂ ರಾಜ್ಯ ಸರ್ಕಾರ ನಿಗದಿ ಪಡಿಸಿರುವ ಅವೈಜ್ಞಾನಿಕ ಪರಿಹಾರವನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಆ ವೇಳೆ ತಿರುಗೇಟು ನೀಡಿದ್ದ ಡಿ.ಕೆ.ಶಿವಕುಮಾರ್‌ ಅವರು ಬಹುತೇಕ ರೈತರು ಭೂಮಿ ನೀಡಲು ಒಪ್ಪಿದ್ದಾರೆ. ಕುಮಾರಸ್ವಾಮಿಯವರು ಆನಗತ್ಯವಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರೈತರ ಜೊತೆ ತಾವೇ ಖುದ್ದಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದರು. ಒಂದು ವೇಳೆ ರೈತರು ತಮಗೆ ಎರಡೇಟು ಹೊಡೆದರೂ ಚಿಂತೆ ಇಲ್ಲ, ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತೇನೆ. ಬಿಡದಿಯ ಟೌನ್‌ಶಿಪ್‌ ಯೋಜನೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಅದರಂತೆ ಇಂದು ತಮ ಅಧಿಕೃತ ನಿವಾಸದಲ್ಲಿ ಡಿ.ಕೆ.ಶಿವಕುಮಾರ್‌ ಅವರು, ಬಿಡದಿ ಟೌನ್‌ಶಿಪ್‌ನ ವ್ಯಾಪ್ತಿಯ 9 ಗ್ರಾಮಗಳ 7,481 ಎಕರೆ ಪ್ರದೇಶದಲ್ಲಿ ಗ್ರೇಟರ್‌ ಬೆಂಗಳೂರು ಸಮಗ್ರ ಉಪನಗರ ಯೋಜನೆ ನಿರ್ಮಾಣ ಕುರಿತು ಚರ್ಚೆ ನಡೆಸಿದ್ದಾರೆ.

ಇಂದಿನ ಸಭೆಯಲ್ಲಿ ಆರಂಭದಲ್ಲಿ ಮಾತನಾಡಿದ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 2006ರಲ್ಲಿ ಬೈರಾಮಂಗಳ ಹಾಗೂ ಕಚ್ಚಗಾರನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಕರೆಯನ್ನು ಉಪನಗರಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವುದಕ್ಕಾಗಿ ಘೋಷಿಸಿದರು. ಆ ಸಂದರ್ಭದಲ್ಲಿ ಅನೇಕ ರೈತರು ವಿರೋಧ ವ್ಯಕ್ತಪಡಿಸಿದರು. ಅದಕ್ಕೆ ಕುಮಾರಸ್ವಾಮಿ ಅವರು ಒಪ್ಪಿಲ್ಲ. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಯಾಗಬೇಕು. ಅದಕ್ಕಾಗು ಉಪನಗರ ಯೋಜನೆ ಮುಂದುವರೆಸುವುದಾಗಿ ಹೇಳಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದರು. ಕೆಲ ರೈತರು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಆದರೆ ಅಲ್ಲಿಯೂ ಹಿನ್ನಡೆಯಾಯಿತು ಎಂದು ಹೇಳಿದರು.

ಬಳಿಕ ಭೂಸ್ವಾಧೀನದ ಅಧಿಸೂಚನೆ ಹೊರಡಿಸಲಾದ ಪ್ರದೇಶಗಳನ್ನು ಕೆಂಪು ವಲಯ ಎಂದು ಘೋಷಿಸಲಾಗಿದೆ. ರೈತರು ತಮ ಭೂಮಿಗಳನ್ನು ಮಾರಾಟ ಮಾಡಲು ಆಗದೇ ನೋವು ಅನುಭವಿಸುತ್ತಿದ್ದಾರೆ. ನಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೀರ್ಘಕಾಲದ ಈ ಸಮಸ್ಯೆಗೆ ಪರಿಹಾರ ದೊರಕಿಸಲು ನಿರ್ಣಯಕೈಗೊಂಡಿದೆ ಎಂದರು.ಬೆಂಗಳೂರಿನ ಸುತ್ತಮುತ್ತ ಉಪನಗರಗಳು ನಿರ್ಮಾಣವಾಗುವ ಅಗತ್ಯ ಇದೆ. ಬಿಡದಿ ಸುತ್ತಮುತ್ತ ಶೇ. 60ರಷ್ಟು ರೈತರು ಭೂಮಿ ಬಿಟ್ಟುಕೊಡಲು ಒಪ್ಪಿದ್ದಾರೆ. ಕೆಲವರ ವಿರೋಧವೂ ಇದೆ. ಯಾವುದೇ ಯೋಜನೆಯಾದರೆ ಪರ ವಿರೋಧ ಸಹಜವಾಗಿರುತ್ತದೆ ಎಂದರು.

ರೈತರು ಮಂಡಿಸಿರುವ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಖುದ್ದು ಉಪಮುಖ್ಯಮಂತ್ರಿಯವರೇ ರೈತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಿದರು.
ರೈತ ಮುಖಂಡ ಎಚ್‌.ಸಿ.ರಾಜಣ್ಣ ಮಾತನಾಡಿ, ಭೂ ಸ್ವಾಧೀನಕ್ಕೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ರೈತರು ಸರ್ಕಾರ ನಿಗದಿಪಡಿಸಿರುವ ಪರಿಹಾರಕ್ಕೆ ಸಹಮತ ಹೊಂದಿದ್ದಾರೆ. ಸಣ್ಣ-ಪುಟ್ಟ ಸಮಸ್ಯೆಗಳಿವೆ ಅವುಗಳ ಪರಿಹಾರಕ್ಕೆ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.

ಪನಗರದ ನಿರ್ಮಾಣದ ವೇಳೆ ಆ ಭಾಗದ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು, ಇ-ಖಾತಾ ಮಾಡಿಸಿಕೊಡಬೇಕು ಎಂಬ ಬೇಡಿಕೆಗಳ ಬಗ್ಗೆ ಉಪ ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಹೇಳಿದರು.ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಈ ಹಿಂದೆ ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ರೈತರ ಜೊತೆ ಸಮಾಲೋಚನೆ ನಡೆಸಲು ಸಾಕಷ್ಟು ಪ್ರಯತ್ನಗಳಾಗಿದ್ದವು. ಸರ್ಕಾರ ನಿಗದಿ ಪಡಿಸುವ ಪರಿಹಾರಕ್ಕೆ ಯಾರ ವಿರೋಧವೂ ಇಲ್ಲ. ಶೇ.20ರಷ್ಟು ರೈತರು ಶೀಘ್ರ ನಮಗೆ ಪರಿಹಾರ ಕೊಡಿ ಎಂದು ಒಪ್ಪಿಗೆ ಪತ್ರ ಕೊಟ್ಟಿದ್ದಾರೆ. ಮೂರು ದಿನಗಳಲ್ಲಿ ಅಧಿಸೂಚನೆ ಹೊರಡಿಸಿ ಜೂನ್‌ ಮೊದಲವಾರದಿಂದ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಮೂರು ಹಳ್ಳಿಗಳನ್ನು ಪ್ರತ್ಯೇಕಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕುಮಾರಸ್ವಾಮಿ ಅವರ ಕಾಲದಲ್ಲೇ ನಿರ್ಧಾರವಾಗಿತ್ತು. ರೈತರಿಗೆ ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ 8 ಸಾವಿರ ಅಡಿ ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಜನರಿಗೆ ತಮನ್ನು ಬೆಂಗಳೂರಿಗರು ಎಂದು ಪರಿಗಣಿಸಿದ್ದಕ್ಕೆ ಖುಷಿಯಾಗಿದ್ದಾರೆ ಎಂದರು.ಈ ಹಿಂದೆ ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆಐಎಡಿಬಿ ವತಿಯಿಂದ ಒಂದು ಸಾವಿರ ಎಕರೆ ಸ್ವಾಧೀನ ಪಡಿಸಿಕೊಳ್ಳಲು ಆದೇಶ ಹೊರಡಿಸಲಾಗಿತ್ತು. ರೈತರು ವಿರೋಧ ವ್ಯಕ್ತಪಡಿಸಿದಾಗ ಕುಮಾರಸ್ವಾಮಿಯವರು ನಾನೇ ಈ ಬಗ್ಗೆ ಸೂಚನೆ ನೀಡಿದ್ದೇನೆ. ಭೂ ಸ್ವಾಧೀನದಿಂದ ಕೈ ಬಿಡಿಸಲಾಗುವುದಿಲ್ಲ ಎಂದು ಹೇಳಿದರು.