ಆಟೋ ಮರ್ಸಿಂಗ್ ಪಾಯಿಂಟ್ ಗಳ ತಪಾಸಣೆ ಕಸ ವಿಲೇವಾರಿಯಲ್ಲಿ ಗೋಲ್‌ಮಾಲ್: ಮಾರ್ಷಲ್‌ಗಳ ಅಮಾನತಿಗೆ ಸೂಚನೆ
Correspondent/GBA/Bengaluru/SM News Desk
ಬೆಂಗಳೂರು, ಜೂ. 18 : ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೋಮ್ಮಲ ಸುನೀಲ್ ಕುಮಾರ್ ಅವರು,ಪುನರಾವರ್ತಿತವಾಗಿ ಸಾರ್ವಜನಿಕರಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಆಟೋ ಮರ್ಸಿಂಗ್ ಪಾಯಿಂಟ್ ಗಳ ತಪಾಸಣೆ ಮಾಡಲು 4 ತಂಡಗಳನ್ನು ರಚಿಸಿ, ಇಂದು ಬೆಳಿಗ್ಗೆ 5.45 ಗಂಟೆಗೆ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಕುರಿತು ನಗರದ ವಿವಿಧ ಪ್ರದೇಶಗಳಲ್ಲಿ ಆಯುಕ್ತರು ಹಾಗೂ ಅಧಿಕಾರಿಗಳು ಅಚ್ಚರಿ ಪರಿಶೀಲನೆ ನಡೆಸಿದರು.
ವಾರ್ಡ್ ಸಂಖ್ಯೆ 59ರ ವ್ಯಾಪ್ತಿಯಲ್ಲಿನ ವೀಲರ್ ಟೌನ್ ಫ್ಲೈಓವರ್ ಹತ್ತಿರದ ಘನ ತ್ಯಾಜ್ಯ ಸ್ವತಃ ಆಯುಕ್ತರು ಹಾಗೂ ಡಿಜಿಎಂ ರಶ್ಮಿ ಅವರುಗಳು ವಾರ್ಡ್ ಸಂಖ್ಯೆ 49ರ ಕೆಎಚ್‌ಬಿ ಕಾಲೋನಿ ಪ್ರದೇಶದಲ್ಲಿ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್ ಅವರು ವಾರ್ಡ್ ಸಂಖ್ಯೆ 27ರ ಚಿಕನ್ ರೋಡ್ ಪ್ರದೇಶದಲ್ಲಿ ಅಪರ ಆಯುಕ್ತರು (ಕಂದಾಯ-ಪ್ರಭಾರ) ಹಾಗೂ ಜಂಟಿ ಆಯುಕ್ತೆ ಪಲ್ಲವಿ ಹಾಗೂ ವಾರ್ಡ್ ಸಂಖ್ಯೆ 24ರ ಕೆಂಪೇಗೌಡ ಲೇಔಟ್ ಪ್ರದೇಶದಲ್ಲಿ ಎಜಿಎಂ ಮಮತಾ ಅವರು ಪರಿಶೀಲನೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಪರಿಶೀಲನೆ ನಡೆಸಿದರು.
ಆಯುಕ್ತ ಪೋಮ್ಮಲ ಸುನೀಲ್ ಕುಮಾರ್ ಹಾಗೂ ಡಿಜಿಎಂ ರಶ್ಮಿ ನೇತೃತ್ವದ ತಂಡವು ವಾರ್ಡ್ ಸಂಖ್ಯೆ 59ರ ಆಟೋ ಮರ್ಸಿಂಗ್ ಪಾಯಿಂಟ್‌ನಲ್ಲಿ ಪರಿಶೀಲನೆ ನಡೆಸಿದ ವೇಳೆ ಒಟ್ಟು 32 ಆಟೋಗಳ ಪೈಕಿ ಆಯುಕ್ತರು ಭೇಟಿ ನೀಡುವ ಮುನ್ನವೇ 7 ಆಟೋಗಳಿಗೆ ಹಾಜರಾತಿ ನೀಡಿದ್ದು, ಕಸ ಸಂಗ್ರಹಣೆಗೆ ತೆರಳಿರುವುದಾಗಿ ತಿಳಿಸಿದ್ದಾರೆ. ಬೆಳಗ್ಗೆ 5.56 ರಿಂದ 7 ಗಂಟೆಯ ವರೆಗೆ 14 ಆಟೋಗಳು ಸ್ಥಳದಲ್ಲಿದ್ದವು. ಅವುಗಳಲ್ಲಿ 5 ಪ್ರಿ-ಲೋಡೆಡ್ ಆಟೋಗಳನ್ನು ಗಮನಿಸಲಾಯಿತು. ಒಟ್ಟಾರೆಯಾಗಿ 21 ಆಟೋಗಳು ಮಾತ್ರ ಹಾಜರಾಗಿರುವುದಾಗಿ ತಿಳಿಸಿದ್ದು, ಆನ್ ಲೈನ್ ಹಾಜರಾತಿ ಪರಿಶೀಲಿಸಲಾಗಿ, ಆಯುಕ್ತರ ಎದುರಿನಲ್ಲೇ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿ 24 ಆಟೋಗಳು ಕಾರ್ಯನಿರ್ವಹಿಸುತ್ತಿದೆ ಎಂದು ನಲ್ಲಿ ನಮೂದಿಸಿದ್ದು, 3 ಆಟೋಗಳಿಗೆ ಹಾಜರಾತಿ ನೀಡಿರುವುದನ್ನು ಗಮನಿಸಲಾಗಿದೆ. ಉಳಿದ ವಾಹನಗಳು ಗೈರಾಗಿರುವುದು ಕಂಡುಬಂದಿರುತ್ತದೆ. ಅಲ್ಲದೆ ಹಾಜರಿದ್ದ ಆಟೋಗಳಲ್ಲಿ ಕೆಲವು ಆಟೋಗಳಿಗೆ ಸಹಾಯಕ ಸಿಬ್ಬಂದಿ ಇಲ್ಲದಿರುವುದು ಗಮನಕ್ಕೆ ಬಂತು. ಯಾವುದೇ ಕಾರ್ಮಿಕರು ಸುರಕ್ಷತಾ ಕೈಗವಸುಗಳನ್ನು ಧರಿಸಿರದಿರುವುದೂ ಕಂಡುಬಂದಿತು.ಇದನ್ನೆಲ್ಲ ಗಮನಿಸಿದ ಆಯುಕ್ತರು ವಾರ್ಡ್ ಮಾರ್ಷಲ್ ನನ್ನು ತಕ್ಷಣ ಕರ್ತವ್ಯದಿಂದ ವಜಾಗೊಳಿಸಲು ನಿರ್ದೇಶಿಸಿದರು.
ತಂಡ 2ರಲ್ಲಿ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್ ಅವರ ನೇತೃತ್ವದ ತಂಡವು ಪರಿಶೀಲಿಸಿದ ವಾರ್ಡ್ ಸಂಖ್ಯೆ 49ರ ಆಟೋ ಮರ್ಸಿಂಗ್ ಪಾಯಿಂಟ್‌ನಲ್ಲಿ ಒಟ್ಟು 25 ಆಟೋಗಳ ಪೈಕಿ ಕೇವಲ 10 ಆಟೋಗಳು ಮಾತ್ರ ಹಾಜರಿರುವುದು ಕಂಡುಬಂದಿತು. ಉಳಿದ ವಾಹನಗಳು ಸ್ಥಳದಲ್ಲಿ ಗೈರಾಗಿದ್ದವು. ಹಾಜರಿದ್ದ ಕೆಲವು ಆಟೋಗಳಲ್ಲಿ ಸಹಾಯಕ ಸಿಬ್ಬಂದಿ ಕೊರತೆ ಕಂಡುಬಂದಿದ್ದು, ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಲಾಗುತ್ತಿರಲಿಲ್ಲ.ಆದಾಗ್ಯೂ, ವಾಸ್ತವವಾಗಿ ಹಾಜರಿದ್ದ ವಾಹನಗಳ ಸಂಖ್ಯೆ ಕಡಿಮೆ ಇದ್ದರೂ, ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು 23 ವಾಹನಗಳು ಕಾರ್ಯನಿರ್ವಹಿಸುತ್ತಿವೆ ಎಂಬ ರೀತಿಯಲ್ಲಿ ಹಾಜರಾತಿ ದಾಖಲಾಗಿರುವುದು ಕಂಡುಬಂದಿತು. ಆದರೆ, ಕೆಲಸ ನಿರ್ವಹಿಸುತ್ತಿದ್ದು 10 ಆಟೋಗಳು ಮಾತ್ರ. ಸಂಬಂಧಿತ ವಾರ್ಡ್ ಮಾರ್ಷಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಂಡ 3ರಲ್ಲಿ ಅಪರ ಆಯುಕ್ತೆ ಪಲ್ಲವಿ ಅವರ ನೇತೃತ್ವದ ತಂಡವು ಪರಿಶೀಲಿಸಿದ ವಾರ್ಡ್ ಸಂಖ್ಯೆ 27ರ ಆಟೋ ಮರ್ಸಿಂಗ್ ಪಾಯಿಂಟ್‌ನಲ್ಲಿ ಒಟ್ಟು 35 ಆಟೋಗಳ ಪೈಕಿ 17 ಆಟೋಗಳು ಮಾತ್ರ ಹಾಜರಿರುವುದು ಕಂಡುಬಂದಿತು. ಉಳಿದ ವಾಹನಗಳು ಸ್ಥಳದಲ್ಲಿ ಲಭ್ಯವಿರಲಿಲ್ಲ. ಹಾಜರಿದ್ದ ಕೆಲವು ವಾಹನಗಳಲ್ಲಿ ಸಿಬ್ಬಂದಿ ಕೊರತೆ ಕಂಡುಬಂದಿದ್ದು, ಸುರಕ್ಷತಾ ಉಪಕರಣಗಳ ಬಳಕೆಯೂ ಸಮರ್ಪಕವಾಗಿರಲಿಲ್ಲ.ಈ ಕುರಿತು ಸಂಬಂಧಿತ ಸಿಬ್ಬಂದಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
