ನಗರದ ಸಾರಕ್ಕಿ ಕೆರೆಯಲ್ಲಿ ಭಾರೀ ಅತಿಕ್ರಮಣ 8 ಕಟ್ಟಡಗಳಿಗೆ ಕಾದಿದೆ ಗ್ರಹಚಾರ
Correspondent/GBA/Bengaluru/SM News Desk
ಬೆಂಗಳೂರು, ಮೇ 8 : ಕಂದಾಯ ಇಲಾಖೆಯ ಇತ್ತೀಚಿನ ಸಮೀಕ್ಷಾ ವರದಿಯಲ್ಲಿ ನಗರದ ಸಾರಕ್ಕಿ ಕೆರೆಯಲ್ಲಿ ಭಾರೀ ಅತಿಕ್ರಮಣ ನಡೆದಿರುವುದು ಬಹಿರಂಗವಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಾರಕ್ಕಿ ಕೆರೆಯ ವ್ಯಾಪ್ತಿಯಲ್ಲಿ ಒಟ್ಟು 58 ಅತಿಕ್ರಮಣ ಪ್ರಕರಣಗಳು ಪತ್ತೆಯಾಗಿದ್ದು, ಬಫರ್ ವಲಯದಲ್ಲಿಯೂ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿರುವುದು ಆತಂಕ ಮೂಡಿಸಿದೆ.ದಕ್ಷಿಣ ಪಾಲಿಕೆ ಹಾಗೂ ಭೂದಾಖಲೆ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಮನೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಒಂದು ದೇವಾಲಯ ಸೇರಿ ಹಲವಾರು ಅತಿಕ್ರಮಣಗಳು ಗುರುತಿಸಲ್ಪಟ್ಟಿವೆ. ಅತಿಕ್ರಮಿತ ಆಸ್ತಿಗಳ ಮೇಲೆ ಸಂಖ್ಯೆಗಳು ಗುರುತು ಹಾಕಿ ಕೆರೆಯ ಗಡಿಯನ್ನು ಗುರುತಿಸಲಾಗಿದೆ.
ಕೆರೆ ಸಮೀಪದ ಬಲಮುರಿ ಪ್ರಸನ್ನ ಮಹಾಗಣಪತಿ ದೇವಸ್ಥಾನದ ಒಂದು ಭಾಗವೂ ಅತಿಕ್ರಮಣದ ಒಳಪಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಈ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ತೆರವು ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ.ಜಿಬಿಎ ಕೆರೆ ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಲಾಗಿದ್ದು, ಕಂದಾಯ ಇಲಾಖೆಯಿಂದ ಅಂತಿಮ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ರಾಜಕೀಯ ಕೈವಾಡದ ಆರೋಪ:ಕೆಲವು ಅತಿಕ್ರಮಣಗಳ ಹಿಂದೆ ಸ್ಥಳೀಯ ರಾಜಕೀಯ ಮುಖಂಡರ ಬೆಂಬಲವಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ತೆರವು ಕಾರ್ಯಾಚರಣೆ ಹೇಗೆ ನಡೆಯಲಿದೆ ಎಂಬ ಪ್ರಶ್ನೆ ಎದುರಾಗಿದೆ.
ಹೈಕೋರ್ಟ್ ಸೂಚನೆ;
ಕಳೆದ ಫೆಬ್ರವರಿಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕೆರೆಯ ಅತಿಕ್ರಮಣ ತೆರವುಗೊಳಿಸಲು ಸಮಿತಿ ರಚಿಸುವಂತೆ ಸೂಚಿಸಿತ್ತು. ಅದರಂತೆ ಸಮಿತಿ ರಚನೆಯಾಗಿ ಅತಿಕ್ರಮಣ ಗುರುತಿಸುವ ಕಾರ್ಯ ನಡೆಯುತ್ತಿದೆ. ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಗಡುವು ನೀಡಲಾಗಿದೆ.
ಕೆರೆಯ ಸ್ವರೂಪ ಬದಲಾವಣೆ;
ಪುಟ್ಟೇನಹಳ್ಳಿ ಪ್ರದೇಶದ ಜೆಪಿ ನಗರ 6 ಮತ್ತು 7ನೇ ಹಂತಗಳ ನಡುವೆ ಇರುವ ಸಾರಕ್ಕಿ ಕೆರೆ ಸುಮಾರು 82.19 ಎಕರೆ ವ್ಯಾಪ್ತಿಯಾಗಿದೆ. ಸಾರ್ವಜನಿಕ ರಸ್ತೆ ನಿರ್ಮಾಣದ ನಂತರ ಕೆರೆಯ ಸ್ವರೂಪದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬಂದಿದೆ. ದಿನೇ ದಿನೇ ಕೆರೆಯ ವ್ಯಾಪ್ತಿ ಕುಗ್ಗುತ್ತಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.ನಿವಾಸಿಗಳ ಆತಂಕಅತಿಕ್ರಮಣ ಗುರುತು ಹಾಕಿರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹೆಚ್ಚಾಗಿದೆ.
ಹಲವಾರು ಮನೆಗಳು ದಶಕಗಳ ಹಿಂದೆ ನಿರ್ಮಾಣವಾಗಿದ್ದು, ಪಾಲಿಕೆ ತೆರಿಗೆ ಸಂಗ್ರಹಿಸುತ್ತಿರುವುದನ್ನು ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಯಾವುದೇ ಲಿಖಿತ ನೋಟಿಸ್ ನೀಡದೆ ಮನೆಗಳನ್ನು ಗುರುತು ಮಾಡಿದ್ದಾರೆ. ನಾವು ತುಂಬಾ ಆತಂಕದಲ್ಲಿದ್ದೇವೆ ಎಂದು ಅಲ್ಲಿನ ನಿವಾಸಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.ನಗರದ ಇತರೆ ಕೆರೆಗಳಲ್ಲಿಯೂ ಬಫರ್ ವಲಯ ಉಲ್ಲಂಘನೆಗಳಿದ್ದರೂ, ಏಕೆ ಸಾರಕ್ಕಿ ಕೆರೆಯೊಂದರ ಮೇಲೆ ಮಾತ್ರ ಕ್ರಮ ಕೇಂದ್ರೀಕರಿಸಲಾಗಿದೆ ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿಬರುತ್ತಿದೆ.
