ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ - ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ...!?
Correspondent/Bengaluru/Political/SM News Desk
ಬೆಂಗಳೂರು, ಮೇ 19 : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮುಂದಿನ ದಿನಗಳಲ್ಲಿ ನಿರ್ನಾಮ ಮಾಡಲು ತುಮಕೂರಿನಲ್ಲಿ ಸಾಧನಾ ಸಮಾವೇಶವನ್ನು ಮಾಡುತ್ತಿ ದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತವಾಗಿ ಮೂರು ವರ್ಷ ಕುರ್ಚಿ ಕಾಳಗ ನಡೆಸಿದ್ದಕ್ಕೆ ಈ ಸಮಾವೇಶ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆ ಕಾಂಗ್ರೆಸ್‌ನವರೇ ಹೇಳಬೇಕು. ತುಮಕೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ 713 ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಇಷ್ಟು ಪೊಲೀಸರನ್ನು ಅಮಾನತು ಮಾಡಿದರು? ಸರ್ಕಾರ ಹೇಳಬೇಕಲ್ಲವೇ? ಯಾವ ಸಾಧನೆ ಮಾಡಿದ್ದೇವೆ ಎಂದು ಸಮಾವೇಶ ಮಾಡುತ್ತಿದ್ದಾರೆ? ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.ಮಿತವ್ಯಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಳಕಳಿಯನ್ನು ಇಡೀ ದೇಶವೇ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಅರ್ಥವಾಗದಿರುವುದು ದುರದೃಷ್ಟಕರ. ಮೋದಿ ಅವರ ಕಾಳಜಿ, ಕಳಕಳಿಯನ್ನು ಅರ್ಥೈಸಿಕೊಂಡು ಜವಾಬ್ದಾರಿಯುತವಾಗಿ ವರ್ತಿಸಿ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕಿದ್ದ ಪ್ರತಿಪಕ್ಷವು ಸಣ್ಣತನದಿಂದ ಅಪಪ್ರಚಾರದಲ್ಲಿ ನಿರತವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಜಗತ್ತಿನ ಎಲ್ಲಾ ದೇಶಗಳ ಮೇಲೆಯೂ ಪ್ರತಿಕೂಲಕರ ಪರಿಣಾಮ ಆಗಿದೆ. ತೈಲ ಉತ್ಪಾದಿಸದೇ ಕೇವಲ ಆಮದಿನ ಮೇಲೆಯೇ ಅವಲಂಬಿತವಾಗಿರುವ ಭಾರತದ ಮೇಲೆ ಹೆಚ್ಚು ಹೊರೆ ಬೀಳುತ್ತದೆ. ಪ್ರಬಲ ರಾಷ್ಟ್ರವಾಗಿರುವ ಭಾರತ ಇಂತಹ ಅನೇಕ ಸವಾಲುಗಳನ್ನು ತಡೆದು ನಿಂತಿದೆ. ಹೀಗಿದ್ದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಪ್ರಧಾನಿಗಳು ಒಂದು ವರ್ಷ ಕಾಲ ಚಿನ್ನ ಖರೀದಿಸದೆ ಆದಷ್ಟು ಮಿತವ್ಯಯ ಪಾಲಿಸಿ ಎಂದು ಹೇಳಿರುವುದು ರಾಷ್ಟ್ರದ ಹಿತದೃಷ್ಟಿಯಿಂದ ಸರಿ ಇದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಭವಿಷ್ಯದಲ್ಲಿ ರಾಷ್ಟ್ರವು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎನ್ನುವ ಏಕೈಕ ಉದ್ದೇಶದಿಂದ ಪ್ರಧಾನಿಗಳು ಪ್ರಜೆಗಳಲ್ಲಿ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಇದರಲ್ಲಿ ಹುಳುಕು ಹುಡುಕುವುದು ಸರಿಯಲ್ಲ. ಪ್ರಧಾನಿಗಳ ಹಿತವಚನವನ್ನು ಪ್ರಜೆಗಳೆಲ್ಲರೂ ಒಪ್ಪಿದ್ದಾರೆ. ಆದರೆ ವಿಪಕ್ಷಗಳು ಮಾತ್ರ ವಿರೋಧಿಸುತ್ತಿವೆ. ನಿಜಕ್ಕೂ ಇದು ವಿಪರ್ಯಾಸ.ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದಿದ್ದರೆ ಏನು ಮಾಡುತ್ತಿತ್ತು? ಸುಖಾ ಸುಮನೆ ರಾಜಕೀಯ ಉದ್ದೇಶದಿಂದ ಟೀಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಸಣ್ಣ ಬುದ್ಧಿಯನ್ನು ಬಿಡಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
