ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರಕ್ಕೆ ಅಲ್ಪಾಯುಷ್ಯ : ಟಿ.ಎ.ಶರವಣ ಭವಿಷ್ಯ

Correspondent/Political/Karnataka/SM News Desk

Jun 5, 2026 - 22:13
Jun 5, 2026 - 22:14
 0  11
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರಕ್ಕೆ ಅಲ್ಪಾಯುಷ್ಯ  : ಟಿ.ಎ.ಶರವಣ ಭವಿಷ್ಯ

ಬೆಂಗಳೂರು, ಜೂ.5 : ಜೆಡಿಎಸ್‌ ಹಿರಿಯ ನಾಯಕ, ವಿಧಾನಪರಿಷತ್‌ ಹಿರಿಯ ಸದಸ್ಯ ಟಿ.ಎ.ಶರವಣ ಅವರು ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡು ರಾಜೀನಾಮೆ ನೀಡಿರುವುದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರಕ್ಕೆ ಅಲ್ಪಾಯುಷ್ಯ ಎಂಬುದನ್ನು ಸಾಬೀತು ಪಡಿಸುತ್ತಿದೆ ಎಂದು ಟೀಕಿಸಿದ್ದಾರೆ.

ಶಿವಕುಮಾರ್‌ ಮತ್ತು ಅವರ ಸಂಪುಟ ಇಂದು ಹಿರಿಯ ಮಂತ್ರಿ ರಾಜೀನಾಮೆ ನೀಡುವ ಮಟ್ಟದ ಬಿಕ್ಕಟ್ಟಿಗೆ ಸಿಲುಕಿರುವುದನ್ನು ನೋಡಿದರೆ ಈ ಸರ್ಕಾರಕ್ಕೆ, ಕಾಂಗ್ರೆಸ್‌ ಪಕ್ಷಕ್ಕೆ ಭವಿಷ್ಯ ಇಲ್ಲ ಎನ್ನುವುದು ಆರಂಭದಲ್ಲೇ ಸಾಬೀತಾಗಿದೆ ಎಂದು ಅವರು ಗೇಲಿ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಪುಟ ರಚನೆ, ಖಾತೆಗಳ ಹಂಚಿಕೆಯ ರೀತಿ ನೋಡಿದರೆ, ಶಿವಕುಮಾರ್‌ ಅವರಿಗೆ ಯಾವುದೇ ನಿಯಂತ್ರಣ ಇಲ್ಲ. ಯಾವುದೇ ಅಽಕಾರವನ್ನು ಹೈಕಮಾಂಡ್‌ ನೀಡಿಲ್ಲ. ಪ್ರತಿ ಹಂತದಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವಿನ ಜಟಾಪಟಿ ಸರ್ಕಾರ ಎಂಬುದು ಸಾಬೀತಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಶಿವಕುಮಾರ್‌ ಅವರ ಒಬ್ಬ ಬೆಂಬಲಿಗರಿಗೆ ಸಂಪುಟದಲ್ಲಿ ಸ್ಥಾನ ಸಿಗದಿರುವುದು ನೋಡಿದರೆ ಅವರೊಬ್ಬ ಸಿದ್ದರಾಮಯ್ಯ, ಹೈಕಮಾಂಡ್‌ ನಿಯಂತ್ರಣದ ರಿಮೋಟ್‌ ಕಂಟ್ರೋಲ್‌ ಎಂಬುದು ವ್ಯಕ್ತವಾಗುತ್ತದೆ. ಕಾಂಗ್ರೆಸ್‌ ಪಕ್ಷದ ಆಡಳಿತ ಬಗ್ಗೆ ಜನರ ನಂಬಿಕೆ ಹುಸಿಯಾಗಿದ್ದು, ರಾಮಲಿಂಗಾರೆಡ್ಡಿ ಅವರಷ್ಟೇ ಅಲ್ಲ, ಹಿರಿಯ ಸಚಿವ ಕೆ.ಎಚ್‌. ಮುನಿಯಪ್ಪ ಕೂಡ ಖಾತೆ ಬಗ್ಗೆ ಬೇಸರಗೊಂಡಿದ್ದು, ರಾಜೀನಾಮೆಗೆ ಚಿಂತನೆ ನಡೆಸಿರುವ ಬಗ್ಗೆ ಮಾಹಿತಿ ಬಂದಿದೆ. ಇದು ಕಾಂಗ್ರೆಸ್‌ ಪಕ್ಷದ ಅರಾಜಕತೆಗೆ ಸಾಕ್ಷಿಯಾಗಿದೆ. ಬರುವ ದಿನಗಳಲ್ಲಿ ಈ ಸರ್ಕಾರ ಆಂತರಿಕ ಕಚ್ಚಾಟದ ಭಾರಕ್ಕೆ ಕುಸಿಯುವುದು ನಿಶ್ಚಿತವಾಗಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.