ಅಡುಗೆ ಎಣ್ಣೆ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಲ್ಲ 40ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಅಪಾಯಕಾರಿ ಎಣ್ಣೆ ಬಳಕೆ ಪತ್ತೆ : 28.91 ಲಕ್ಷ ದಂಡ

Correspondent/Bengaluru/Food/SM News Desk

Jul 24, 2026 - 08:32
 0  15
ಅಡುಗೆ ಎಣ್ಣೆ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಲ್ಲ 40ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಅಪಾಯಕಾರಿ ಎಣ್ಣೆ ಬಳಕೆ ಪತ್ತೆ : 28.91 ಲಕ್ಷ ದಂಡ

ಬೆಂಗಳೂರು, ಜುಲೈ 23 : ಬೆಂಗಳೂರಿನಲ್ಲಿ ನಡೆಸಿದ ವಿಶೇಷ ತಪಾಸಣೆಯಲ್ಲಿ 40ಕ್ಕೂ ಹೆಚ್ಚು ಆಹಾರ ಮಳಿಗೆಗಳಲ್ಲಿ ಬಳಸಲಾಗುತ್ತಿದ್ದ ಅಡುಗೆ ಎಣ್ಣೆ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೋಟೆಲ್‌, ಪಬ್‌, ಬಾರ್‌, ಕ್ಲಬ್‌, ರೆಸ್ಟೋರೆಂಟ್‌ಗಳು ಹಾಗೂ ರಸ್ತೆ ಬದಿಯ ಆಹಾರ ಮಳಿಗೆಗಳಲ್ಲಿ ಬಳಸಲಾಗುತ್ತಿರುವ ಕರಿದ ಅಡುಗೆ ಎಣ್ಣೆಯ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಗಂಭೀರ ಆತಂಕ ವ್ಯಕ್ತಪಡಿಸಿದೆ. 

ಅಧಿಕಾರಿಗಳ ಮಾಹಿತಿ ಪ್ರಕಾರ, ನಗರದ ವಿವಿಧ ಆಹಾರ ಮಳಿಗೆಗಳಿಂದ ಬಳಸಿದ ಅಡುಗೆ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿತ್ತು. ಪರೀಕ್ಷೆಯಲ್ಲಿ ಹಲವು ಮಾದರಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಮಟ್ಟದಲ್ಲಿ ಟ್ರಾನ್ಸ್ ಫ್ಯಾಟ್‌‍ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಹೋಟೆಲ್‌ ಹಾಗೂ ಆಹಾರ ಮಳಿಗೆಗಳ ಮಾಲೀಕರಿಗೆ ಆಹಾರ ಸುರಕ್ಷತಾ ಇಲಾಖೆ ನೋಟಿಸ್‌‍ ಜಾರಿಗೊಳಿಸಿದ್ದು, ಒಟ್ಟು 28.91 ಲಕ್ಷ ದಂಡ ವಿಧಿಸಿದೆ.ತಜ್ಞರ ಪ್ರಕಾರ, ಕರಿದ ಎಣ್ಣೆಯನ್ನು ಪದೇ ಪದೇ ಮರುಬಳಕೆ ಮಾಡುವುದರಿಂದ ಅದರಲ್ಲಿ ಟ್ರಾನ್ಸ್ ಫ್ಯಾಟ್‌ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಫ್ಯಾಟಿ ಲಿವರ್‌ ಕೆಲವು ವಿಧದ ಕ್ಯಾನ್ಸರ್‌ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹೋಟೆಲ್‌, ಪಬ್‌, ಬಾರ್‌, ಕ್ಲಬ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಎಣ್ಣೆಯ ಮರುಬಳಕೆ ಮತ್ತು ಅದರ ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.ಸಾರ್ವಜನಿಕರು ರಸ್ತೆ ಬದಿ ಹಾಗೂ ವಿವಿಧ ಆಹಾರ ಮಳಿಗೆಗಳಲ್ಲಿ ಕರಿದ ಆಹಾರ ಸೇವಿಸುವಾಗ ಸ್ವಚ್ಛತೆ ಮತ್ತು ಬಳಸಲಾಗಿರುವ ಅಡುಗೆ ಎಣ್ಣೆಯ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಆಹಾರ ಸುರಕ್ಷತಾ ಇಲಾಖೆ ಮನವಿ ಮಾಡಿದೆ.