ಕರ್ನಾಟಕ ಉಪಚುನಾವಣೆ : ಬಾಗಲಕೋಟೆ ,ದಾವಣಗೆರೆ ದಕ್ಷಿಣ ಎರಡೂ ಕ್ಷೇತ್ರಗಳು `ಕೈ’ವಶ
Correspondent/Political/Karnatka/SM News Desk
ಬೆಂಗಳೂರು, ಮೇ 4 : ಎರಡು ಉಪಚುನಾವಣೆಗಳ ಪೈಕಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಸುಮಾರು 22 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 16ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಾಗಲಕೋಟೆ ಸಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಹುಲ್ಲಪ್ಪ ಮೇಟಿ 93 ಸಾವಿರಕ್ಕೂ ಹೆಚ್ಚಿನ ಮತಗಳನ್ನು ಪಡೆದು ಬಿಜೆಪಿಯ ವೀರಣ್ಣ ಚರಂತಿಮಠ್ ಅವರನ್ನು ಸೋಲಿಸಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ ಅವರಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶ್ಯಾಮನೂರು ಮಲ್ಲಿಕಾರ್ಜುನ್ 17ನೇ ಸುತ್ತಿನಲ್ಲಿ 55,700 ಮತಗಳನ್ನು ಪಡೆದಿದ್ದರು.
ಬಿಜೆಪಿಯ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ 49,523 ಮತಗಳನ್ನು ಪಡೆದಿದ್ದು, 6177 ಮತಗಳ ಅಂತರವಿತ್ತು. ಪ್ರಮುಖವಾಗಿ ಎಸ್‌ಡಿಪಿಐನ ಅಭ್ಯರ್ಥಿ ಅಫ್ಸರ್ ಕೊಡ್ಲುಪೇಟೆ 17 ಸಾವಿರಕ್ಕೂ ಹೆಚ್ಚಿನ ಮತಗಳು ಪಡೆದು ಕಾಂಗ್ರೆಸ್ ಪಾಲಿಗೆ ಕಂಟಕವಾಗಿದ್ದರು.ಬಾಗಲಕೋಟೆಯ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ಗೆ ನಿಚ್ಚಳ ಗೆಲುವು ತಂದುಕೊಟ್ಟಿದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮುನಿಸು ನೀರು ಕುಡಿಸಿತು. ಆರಂಭದ 7 ಸುತ್ತುಗಳ ವರೆಗೂ ಬಿಜೆಪಿಯ ಅಭ್ಯರ್ಥಿಯೇ ಮುನ್ನಡೆ ಸಾಧಿಸಿದರು. 8ನೇ ಸುತ್ತಿನ ಬಳಿಕ ಸಮರ್ಥ್ ಮಲ್ಲಿಕಾರ್ಜುನ್ ಚೇತರಿಸಿಕೊಂಡರು. ಆದರೂ ಕೊನೆಯ ಹಂತದವರೆಗೂ ಕುತೂಹಲ ಉಳಿದಿತ್ತು.
ಕರ್ನಾಟಕದಲ್ಲಿ ನಡೆದ ಎರಡು ಉಪಚುನಾವಣೆಗಳ ಪೈಕಿ ಬಿಜೆಪಿ ಬಾಗಲಕೋಟೆಯಲ್ಲಿ ಗೆಲ್ಲಬಹುದೆಂಬ ನಿರೀಕ್ಷೆಗಳು ಹುಸಿಯಾದವು. ಅಲ್ಪಸಂಖ್ಯಾತರ ಮುನಿಸಿನ ಲಾಭವನ್ನು ದಾವಣಗೆರೆಯಲ್ಲಿ ಪಡೆದುಕೊಳ್ಳಬಹುದು ಎಂಬ ಅಂದಾಜುಗಳು ತಲೆಕೆಳಕಾಗಿವೆ. ರಾಜ್ಯ ಸರ್ಕಾರಕ್ಕೆ ಉಪಚುನಾವಣೆ ಪ್ರತಿಷ್ಠೆಯ ಪಣವಾಗಿತ್ತು.
