ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಲು ಸೂಚನೆ

Correspondent/Political/Karnataka/SM News Desk

Jun 5, 2026 - 22:00
 0  6
ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಲು ಸೂಚನೆ

ಬೆಂಗಳೂರು,ಜೂ.5 :  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸೂಚನೆ ಮೇರೆಗೆ ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಯು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಲು ಸೂಚನೆ ನೀಡಲಾಗಿದೆ.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರು, ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಈ ಸಂಬಂಧ ನಿರ್ದೇಶನ ನೀಡಿದ್ದಾರೆ.

ಇ-ಆಡಳಿತ ಇಲಾಖೆಯು ಸಿದ್ದಪಡಿಸಿರುವ ಕರ್ತವ್ಯ ಆ್ಯಪ್‌ನಲ್ಲಿ ಈಗಾಗಲೇ ಹೆಚ್‌ಆರ್‌ಎಂಎಸ್‌‍ ಲಭ್ಯವಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮಾಹಿತಿಯನ್ನು ನೋಂದಾಯಿಸಲಾಗಿದೆ. ಆದರೂ ಬಹಳಷ್ಟು ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಆ್ಯಪ್‌ನ್ನು ನಿರಂತರವಾಗಿ ಬಳಸುತ್ತಿಲ್ಲ ಎಂಬುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಗ್ಗೆ 10 ಗಂಟೆಗೆ ಕರ್ತವ್ಯ ಆ್ಯಪ್‌ನಲ್ಲಿ ಹಾಜರಾತಿಯನ್ನು ಚೆಕ್‌ ಇನ್‌ನಲ್ಲಿ ಹಾಗೂ ಕಚೇರಿಯಿಂದ ನಿರ್ಗಮಿಸುವಾಗ ಚೆಕ್‌ ಔಟ್‌ನಲ್ಲಿ ದಾಖಲಿಸಲು ಸೂಚಿಸಿದ್ದಾರೆ.

ಇ- ಆಡಳಿತ ಇಲಾಖೆಯು ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು ಕೃತಕಬುದ್ದಿಮತ್ತೆ ತಂತ್ರಾಂಶದ ಮೂಲಕ ಆಯಾ ಇಲಾಖಾ ಮುಖ್ಯಸ್ಥರಿಗೆ ಸ್ವಯಂ ಚಾಲಿತವಾಗಿ ವರದಿಯನ್ನು ಕಳುಹಿಸಲು ಕ್ರಮ ಕೈಗೊಳ್ಳಲು ನಿರ್ದೇಶನ ಮಾಡಿದ್ದಾರೆ.ಎಲ್ಲಾ ಇಲಾಖೆಯ ಮುಖ್ಯಸ್ಥರು ತಮ ವೈಯಕ್ತಿಕ ಲಾಗಿನ್‌ ಮೂಲಕ ಕರ್ತವ್ಯ ಡ್ಯಾಶ್‌ಬೋರ್ಡ್‌ನಲ್ಲಿ ಪ್ರತಿದಿನ ಕಡ್ಡಾಯವಾಗಿ ಹಾಜರಾತಿಯ ವರದಿಯನ್ನು ಪರಿಶೀಲಿಸಬೇಕು ಹಾಗೂ ಹಾಜರಾತಿ ದಾಖಲಿಸದವರಿಗೆ ಸೂಕ್ತ ಸೂಚನೆ ನೀಡಬೇಕು.

ಒಂದು ವೇಳೆ ಅಧಿಕಾರಿಗಳು, ಸಿಬ್ಬಂದಿಗಳು ಕಚೇರಿ ಕರ್ತವ್ಯದ ಮೇಲೆ ಪ್ರವಾಸದಲ್ಲಿದ್ದರೆ ಒಒಡಿ ಆಪ್ಷನ್‌ನಲ್ಲಿರುವ ಪ್ರವಾಸದ ಉದ್ದೇಶವನ್ನು ನಮೂದಿಸಿ ಹಾಜರಾತಿ ದಾಖಲಿಸಲು ಸೂಚಿಸಲಾಗಿದೆ. ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ದೃಢೀಕರಿಸಬೇಕು. ಈ ಆದೇಶವು ಅತ್ಯಂತ ತುರ್ತು ಮತ್ತು ಕಡ್ಡಾಯವೆಂದು ಪರಿಗಣಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಅವರು ಸೂಚನೆ ನೀಡಿದ್ದಾರೆ.