ಸೈಬರ್‌ ವಂಚನೆ ತಾಯಿ, ಮಗಳಿಗೆ 2 ಕೋಟಿ ಹಣ ದೋಚಿದ ವಂಚಕ...!?

Correspondent/Crime/Bengaluru/SM News Desk

May 7, 2026 - 16:41
 0  17
ಸೈಬರ್‌ ವಂಚನೆ ತಾಯಿ, ಮಗಳಿಗೆ  2 ಕೋಟಿ ಹಣ ದೋಚಿದ ವಂಚಕ...!?

ಬೆಂಗಳೂರು, ಮೇ7 :  ನಗರದ ವೃದ್ಧೆಯೊಬ್ಬರಿಗೆ ಕರೆ ಮಾಡಿದ ಸೈಬರ್‌ ವಂಚಕ ಎನ್‌ಐಎ ಅಧಿಕಾರಿ ಸೋಗಿನಲ್ಲಿ ಡಿಜಿಟಲ್‌ ಅರೆಸ್ಟ್‌ ಮೂಲಕ 2.1 ಕೋಟಿ ಹಣ ವರ್ಗಾಹಿಸಿಕೊಂಡಿರುವುದು ಬೆಳಕಿಗೆ ಬಂದಿದೆ.ಜಯನಗರದ ನಿವಾಸಿಯಾಗಿರುವ 78 ವರ್ಷದ ವೃದ್ಧೆ ಹಾಗೂ ಪುತ್ರಿಗೆ ಏಪ್ರಿಲ್‌ 13 ರಂದು ವಾಟ್ಸಪ್‌ ಕರೆ ಮಾಡಿದ ಅಪರಿಚಿತ ವ್ಯಕ್ತಿ ಎನ್‌ಐಎ ಅಧಿಕಾರಿ ಪ್ರದೀಪ್‌ ಜಸ್ವಾಲ್‌ ಎಂದು ಪರಿಚಯಿಸಿಕೊಂಡು ನಿಮ ಡೆಬಿಟ್‌ ಕಾರ್ಡ್‌ನ್ನು ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯ ಬಳಸುತ್ತಿದ್ದಾನೆಂದು ಬೆದರಿಸಿದ್ದಾನೆ.ಈ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದು ಎಂದು ಎಚ್ಚರಿಸಿ, ಮಹಿಳೆಯ ಕುಟುಂಬ ಸದಸ್ಯರ ಗುರುತಿನ ದಾಖಲೆಗಳ ಪ್ರತಿಗಳನ್ನು ಪಡೆದುಕೊಂಡು ನಿಮ ಮಗಳು ಈ ಪ್ರಕರಣದಲ್ಲಿದ್ದಾಳೆ ಎಂದು ಪೊಲೀಸ್‌‍ ಠಾಣೆಯಂತೆ ಕಾಣುವ ಪ್ರದೇಶದಿಂದ ವಿಡಿಯೋ ಕಾಲ್‌ ಮಾಡಿ ನಂಬಿಸಿದ್ದಾನೆ.

ತದ ನಂತರದಲ್ಲಿ ನೀವು ತನಿಖೆಗೆ ಸಹಕರಿಸದಿದ್ದರೆ ಸಾರ್ವಜನಿಕವಾಗಿ ಬಂಧಿಸಲಾಗುವುದೆಂದು ಬೆದರಿಕೆ ಹಾಕಿ ಆರ್‌ಬಿಐ ಮಾರ್ಗಸೂಚಿಯಂತೆ ಹಣದ ವ್ಯವಹಾರಗಳ ಪರಿಶೀಲನೆ ಮಾಡಬೇಕಿದೆ ಎಂದು ಬ್ಯಾಂಕ್‌ ಖಾತೆ ವಿವರಗಳನ್ನು ಪಡೆದುಕೊಂಡು ಪರಿಶೀಲನೆ ಬಳಿಕ ಹಣ ಮರಳಿ ನೀಡಲಾಗುವುದೆಂದು ತಿಳಿಸಿದ್ದಾನೆ.ವಂಚಕನ ಮಾತು ನಂಬಿದ ತಾಯಿ, ಮಗಳು ಅವರು ಹೇಳಿದ ಖಾತೆಗಳಿಗೆ ಹಣವನ್ನು ವರ್ಗಾಹಿಸಿರುವುದಲ್ಲದೇ ತಮ ಬಳಿ ಇದ್ದ ಚಿನ್ನವನ್ನು ಸಹ ಅಡವಿಟ್ಟು ಹಣವನ್ನು ನೀಡಿದ್ದಾರೆ. ಒಟ್ಟಾರೆ ಏ.15 ರಿಂದ 20 ರ ವರೆಗೆ ಒಟ್ಟು 2.1 ಕೋಟಿ ಹಣವನ್ನು ಹಾಕಿದ್ದಾರೆ.

ಕೋಟ್ಯಾಂತರ ಹಣ ಪಡೆದುಕೊಂಡ ನಂತರವೂ ವಂಚಕ ಇನ್ನಷ್ಟು ಹಣ ಕೇಳಿದಾಗ ಅನುಮಾನಗೊಂಡು ವಿಚಾರಿಸಿದಾಗ ಸೈಬರ್‌ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ತಕ್ಷಣ ಅವರು ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.