ನಿರ್ಜನ ಪ್ರದೇಶದಲ್ಲಿ ಕಾರು ಬೆಂಕಿಗೆ ಆಹುತಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣ ಪರಾರಿಯಾಗಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಆತಹತ್ಯೆ !?
Correspondent/Doddaballapura/SM News Desk
ದೊಡ್ಡಬಳ್ಳಾಪುರ, ಮೇ 4 : ನಿರ್ಜನ ಪ್ರದೇಶದಲ್ಲಿ ಕಾರು ಬೆಂಕಿಗೆ ಆಹುತಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಾರಿಯಾಗಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಆತಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತನನ್ನು ಮಾರಸಂದ್ರ ಗ್ರಾಮದ ನಿವಾಸಿ ರಾಮಾಂಜಿನಪ್ಪ (46) ಎಂದು ಗುರುತಿಸಲಾಗಿದೆ.ಈತ ಬಿಡದಿ ಸಮೀಪ ರೈಲಿಗೆ ಸಿಲುಕಿ ಆತಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದ್ದು, ಈ ಸಂಬಂಧ ಮೆಜೆಸ್ಟಿಕ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರದಂದು ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಸಮೀಪ ಕಾರಿಗೆ ಬೆಂಕಿ ಹೊತ್ತಿಕೊಂಡು ಅದರೊಳಗೆ ಮಹಿಳೆಯೊಬ್ಬರು ಸುಟ್ಟು ಕರಕಲಾಗಿದ್ದ ಘಟನೆ ನಡೆದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರಿನೊಳಗೆ ಮಹಿಳೆಯ ಅವಶೇಷಗಳನ್ನು ಪತ್ತೆ ಹಚ್ಚಿದ್ದರು.ಪತ್ತೆಯಾದ ಕಾರು ಮಾರಸಂದ್ರ ನಿವಾಸಿ ಸುರೇಶ್ ಅವರಿಗೆ ಸೇರಿದ್ದಾಗಿದ್ದು, ಅನಾರೋಗ್ಯದ ಕಾರಣ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಪಕ್ಕದ ಮನೆಯ ರಾಮಾಂಜಿನಪ್ಪ ಕಾರನ್ನು ತೆಗೆದುಕೊಂಡು ಹೋಗಿದ್ದನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಘಟನಾ ಸ್ಥಳದ ಸಮೀಪ ರಾಮಾಂಜಿನಪ್ಪನದ್ದೆಂದು ಶಂಕಿಸಲಾದ ಅರೆ ಬೆಂದ ಅಂಗಿ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದ್ದರ ಹಿನ್ನೆಲೆ ಅನುಮಾನ ವ್ಯಕ್ತವಾಗಿತ್ತು. ಅನೈತಿಕ ಸಂಬಂಧದ ಹಿನ್ನೆಲೆ ಈ ಕೃತ್ಯ ನಡೆದಿರಬಹುದೆಂಬ ಶಂಕೆಯಿಂದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಆತ ಆತಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಕಾರಿನೊಳಗೆ ಸುಟ್ಟು ಕರಕಲಾಗಿದ್ದ ಮೃತ ಮಹಿಳೆಯನ್ನು ದೇವನಹಳ್ಳಿ ತಾಲೂಕಿನ ಸುಜಾತ (35) ಎಂದು ಗುರುತಿಸಲಾಗಿದೆ. ಗೌರಿಬಿದನೂರಿನ ತಾಯಿಯ ಮನೆಯಿಂದ ಗಂಡನ ಮನೆಗೆ ಹೋಗುವುದಾಗಿ ತೆರಳಿದ್ದರು ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಪಾಂಡುರಂಗ ಹಾಗೂ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರಿನ ಮಾಲೀಕ ಸುರೇಶ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
