ಶಂಕರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆರೆಮನೆ ಮಹಿಳೆ ತಬ್ಬಿಕೊಂಡು ವಿಕೃತಿ : ಪ್ರಶ್ನಿಸಿದ ಪತಿ ಮೇಲೆಯೇ ಮಚ್ಚಿನಿಂದ ಹಲ್ಲೆ
Correspondent/Crime News/Bengaluru/SM News Desk
ಬೆಂಗಳೂರು,ಮೇ 7 : ಶಂಕರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಪಾತ್ರೆ ತೊಳೆಯುತ್ತಿದ್ದಾಗ ನೆರೆಮನೆಯಾತ ಬಂದು ಹಿಂದಿನಿಂದ ತಬ್ಬಿಕೊಂಡು ವಿಕೃತಿ ಮೆರೆದಿದ್ದಲ್ಲದೇ ರೇಗಿಸಿ ಚುಡಾಯಿಸುತ್ತಿದ್ದುದನ್ನು ಪ್ರಶ್ನೆ ಮಾಡಿದ ಆಕೆಯ ಪತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ರಂಗಾರಾವ್ ರಸ್ತೆಯ ವಠಾರದ ನಿವಾಸಿ, ಕಾರು ಚಾಲಕ ಪುಟ್ಟರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗಿರೀಶ್ ಜೈನ್ ಎಂಬುವವರ ಈ ವಠಾರದಲ್ಲಿ ಸೆಕ್ಯೂರಿಟಿಗಾರ್ಡ್ ಆಗಿರುವ ನಂದೀಶ್ ದಂಪತಿ ಹಾಗೂ ಪುಟ್ಟರಾಜು ದಂಪತಿ ಅಕ್ಕಪಕ್ಕ ಮನೆಯಲ್ಲಿ ವಾಸವಾಗಿದ್ದಾರೆ.ನಂದೀಶ್ ಅವರ ಪತ್ನಿ ಪಾತ್ರೆ ತೊಳೆಯುವ ವೇಳೆ ಪುಟ್ಟರಾಜು ಮನೆಯ ಬಾಗಿಲು ಅರ್ಧಕ್ಕೆ ತೆಗೆದು ನೋಡುತ್ತಿದ್ದನಂತೆ. ನಂದೀಶ್ ಅವರ ಪತ್ನಿ ಪಾತ್ರೆ ತೊಳೆಯುತ್ತಿದ್ದಾಗ, ನೆರೆಮನೆಯ ಪುಟ್ಟರಾಜು ಹಿಂದಿನಿಂದ ಹೋಗಿ ತಬ್ಬಿಕೊಂಡಿದ್ದಾನೆ. ಇದನ್ನು ಗಮನಿಸಿದ ನಂದೀಶ್ ಮಚ್ಚು ತೆಗೆದುಕೊಂಡು ಬಂದು ಪ್ರಶ್ನಿಸುತ್ತಿದ್ದಂತೆ ಪುಟ್ಟರಾಜು ದೋಸೆ ತವಾದಿಂದ ಹೊಡೆದು ನಂತರ ಅದೇ ಮಚ್ಚನ್ನು ಕಸಿದುಕೊಂಡು ನಂದೀಶ್ ಮೇಲೆಯೇ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ಗಾಯಗೊಂಡಿರುವ ನಂದೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪುಟ್ಟರಾಜುನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
