ಮೇ3 ರ ಭಾನುವಾರದಂದು ನೀಟ್‌ ಪರೀಕ್ಷೆ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು: ಸಕಲ ಸಿದ್ಧತೆ

Correspondent/Education/SM News Desk

May 1, 2026 - 19:33
 0  38
ಮೇ3 ರ ಭಾನುವಾರದಂದು ನೀಟ್‌ ಪರೀಕ್ಷೆ  22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು: ಸಕಲ ಸಿದ್ಧತೆ

ಬೆಂಗಳೂರು,ಮೇ1:  ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್‌ ಯುಜಿ 2026 ಮೇ 3ರಂದು ನಡೆಯಲಿದೆ. ಭಾನುವಾರದಂದು ಮಧ್ಯಾಹ್ನ 2ರಿಂದ ಸಂಜೆ 5 ಗಂಟೆವರೆಗೆ ದೇಶದಾದ್ಯಂತ ಒಂದೇ ಹಂತದಲ್ಲಿ ಈ ಪರೀಕ್ಷೆ ನಡೆಯುತ್ತದೆ.

ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಬಿಬಿಎಸ್‌‍ , ಬಿಡಿಎಸ್‌‍ ಮತ್ತು ಇತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಕನಸು ನನಸಾಗಿಸಲು ಈ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ನೀಟ್‌ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಲೀಕ್‌, ಅಕ್ರಮ ಮತ್ತು ಅನ್ಯಾಯದ ಆರೋಪಗಳು ಹೆಚ್ಚಾಗಿದ್ದವು.

ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮತ್ತು ಅಸಮಾಧಾನ ಹೆಚ್ಚಾಗಿತ್ತು. ಈ ಬಾರಿ ಅಂತಹ ಕಹಿ ಘಟನೆಗಳು ಪುನರಾವರ್ತನೆಯಾಗದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಸಕಲ ಎಚ್ಚರಿಕೆ ವಹಿಸಿದೆ. ಈ ಬಾರಿ ಎನ್‌ಟಿಎ ಜೀರೋ ಲೀಕ್‌ ಪಾಲಿಸಿ ಅನ್ನು ಜಾರಿಗೊಳಿಸಿದೆ.

ಪ್ರಶ್ನೆಪತ್ರಿಕೆಗಳನ್ನು ಮುದ್ರಣದಿಂದ ಪರೀಕ್ಷಾ ಕೇಂದ್ರಗಳವರೆಗೆ ಜಿಪಿಎಸ್‌‍ ಟ್ರ್ಯಾಕಿಂಗ್‌ನೊಂದಿಗೆ ಪೊಲೀಸ್‌‍ ಎಸ್ಕಾರ್ಟ್‌ನಲ್ಲಿ ಸಾಗಿಸಲಾಗುತ್ತಿದೆ. ಡಬಲ್‌ ಲಾಕ್‌ ಸ್ಟ್ರಾಂಗ್‌ರೂಮ್‌ಗಳಲ್ಲಿ 24 ಗಂಟೆ ಸಿಸಿಟಿವಿ ನಿಗಾ ಇರಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್‌ ವೆರಿಫಿಕೇಷನ್‌ ಮತ್ತು ಫೇಷಿಯಲ್‌ ರೆಕಗ್ನಿಷನ್‌ ಮತ್ತು ಫಿಂಗರ್‌ಪ್ರಿಂಟ್‌, ಹಾಗೂ ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾಗಳು, 5ಜಿ ಜ್ಯಾಮರ್‌ಗಳು, ಡಿಜಿಟಲ್‌ ಫ್ರಿಸ್ಕಿಂಗ್‌ ಮತ್ತು ಲೈವ್‌ ಮಾನಿಟರಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ವಿದ್ಯಾರ್ಥಿಗಳು ಅಡಿಟ್‌ ಕಾರ್ಡ್‌, ಮೂಲ ಗುರುತಿನ ಚೀಟಿ ಜೊತೆಗೆ ತರಬೇಕು. ಮೊಬೈಲ್‌ ಫೋನ್‌, ಕ್ಯಾಲ್ಕುಲೇಟರ್‌, ವಾಚ್‌, ನೀರು ಬಾಟಲ್‌ ಸೇರಿದಂತೆ ಹಲವು ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಬಾರದು. ಎಲ್ಲಾ ಕೇಂದ್ರಗಳಲ್ಲಿ ತೀವ್ರ ಫ್ರಿಸ್ಕಿಂಗ್‌ ನಡೆಯಲಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಲೀಕ್‌ ಸುದ್ದಿಗಳನ್ನು ನಂಬದಂತೆ ಎನ್‌ಟಿಎ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.

ಈ ಬಾರಿಯ ನೀಟ್‌ ಪರೀಕ್ಷೆ ಪಾರದರ್ಶಕತೆ, ನ್ಯಾಯಯುತವಾಗಿ ಮತ್ತು ಅಕ್ರಮರಹಿತ ವಾತಾವರಣವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಮ ಸಿದ್ಧತೆಯ ಮೇಲೆ ಪೂರ್ಣ ಗಮನ ಕೇಂದ್ರೀಕರಿಸಿ, ಆತವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಸಲಹೆ ನೀಡಲಾಗಿದೆ.

ಕಳೆದೆರೆಡು ಬಾರಿ ನೀಟ್‌ ಪರೀಕ್ಷೆಯಲ್ಲಿ ಉಂಟಾದ ಗೊಂದಲಗಳು ಮತ್ತು ಅಕ್ರಮಗಳು ಪುನಃ ಆಗದಂತೆ ಪರೀಕ್ಷಾ ಮಂಡಳಿ ಈ ಬಾರಿ ಮುನ್ನೆಚ್ಚರಿಕೆ ವಹಿಸಿದೆ.