ಭಾರತೀಯ ವೈದ್ಯಕೀಯ ಸಂಘ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ ಹಾಗೂ ಡಾಕ್ಟರ್ ಮೋಹನ್ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಹಾಗೂ ದಂತ ತಪಾಸಣೆ ಶಿಬಿರ
Correspondent/Chikkaballapura/Krishnappa/SM News Desk
ಚಿಕ್ಕಬಳ್ಳಾಪುರ : ಕಣ್ಣುಗಳು ನಮ್ಮ ಅತಿ ಅಮೂಲ್ಯವಾದ ಆಸ್ತಿ, ಕಣ್ಣಿನ ಬಗ್ಗೆ ಜಾಗೃತಿ ಅತ್ಯಗತ್ಯ ಅಲ್ಲದೆ ಅವುಗಳ ಆರೋಗ್ಯವು ದೃಷ್ಟಿ, ಶಿಕ್ಷಣ, ಮತ್ತು ಜೀವನದ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ ಇಂತಹ ಕಣ್ಣಿನ ಬಗ್ಗೆ ಅತ್ಯಂತ ಜಾಗರೂಕರಾಗಿ ಇದ್ದು ಕಣ್ಣುಗಳನ್ನು ಕಾಪಾಡಿಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಹಾಗೂ ನೇತ್ರ ತಜ್ಞ ಡಾ. ಕೆ. ಎನ್.ಮೋಹನ್ ಬಾಬು ಸಲಹೆ ನೀಡಿದರು.
ಅವರು ಚಿಕ್ಕಬಳ್ಳಾಪುರ ನಗರದ ಅಲ್ ಕಲಾಂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಭಾರತೀಯ ವೈದ್ಯಕೀಯ ಸಂಘ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ, ಕಿಡ್ಮತ್ ಹೆಲ್ತ್ ಮಿಷನ್ ರಾಜೀವ್ ಗಾಂಧಿ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಹಾಗೂ ಡಾಕ್ಟರ್ ಮೋಹನ್ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಹಾಗೂ ದಂತ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ ಕಣ್ಣಿನ ಆರೈಕೆಗೆ ನಿಯಮಿತ ತಪಾಸಣೆ, ಸಮತೋಲಿತ ಆಹಾರ, ಸ್ಕ್ರೀನ್ ಟೈಮ್ ನಿಯಂತ್ರಣ, ಮತ್ತು ಕಣ್ಣಿನ ರಕ್ಷಣೆ ಮೂಲಕ ದೃಷ್ಟಿಹೀನತೆ ಮತ್ತು ಕುರುಡುತನವನ್ನು ತಡೆಯುವುದಕ್ಕೆ ಕಣ್ಣುಗಳನ್ನು ಕಾಪಾಡಿಕೊಳ್ಳಲು ದೈನಂದಿನ ಕಾಳಜಿ ಮತ್ತು ಮುನ್ನೆಚ್ಚರಿಕೆ ಮುಖ್ಯ ಎಂದ ಅವರು ಕಣ್ಣುಗಳಿಲ್ಲದೆ ಜೀವನ ಕತ್ತಲುಮಯ, ದೃಷ್ಟಿಹೀನತೆಯು ದೈನಂದಿನ ಚಟುವಟಿಕೆಗಳಿಗೆ ದೊಡ್ಡ ಅಡ್ಡಿಯಾಗುತ್ತದೆ ಇನ್ನೂ ಮಕ್ಕಳ ವಿಷಯಕ್ಕೆ ಬಂದರೆ ಸರಿಯಾದ ದೃಷ್ಟಿಯು ಮಕ್ಕಳ ಕಲಿಕೆಗೆ ಅತ್ಯಗತ್ಯ, ದೃಷ್ಟಿ ದೋಷವು ಶಾಲಾ ಸಾಧನೆಯನ್ನು ಕುಗ್ಗಿಸುತ್ತದೆ ಹೀಗಾಗಿ ಪ್ರತಿಯೊಬ್ಬರು ಕಣ್ಣಿನ ಬಗ್ಗೆ ಹೆಚ್ಚು ಜಾಗರೂಕರಾಗಿ ಸ್ವಲ್ಪ ಏರುಪೇರಾದರೂ ಕಣ್ಣಿನ ತಜ್ಞ ವೈದ್ಯರನ್ನ ಸಂಪರ್ಕಿಸುವುದು ಒಳಿತು ಎಂದರು
ಸಾಮಾನ್ಯ ದಂತ ವೈದ್ಯರಾದ ಡಾ ಉಮ್ಮಾಯಿ ಕುಲ್ಸುಮ್ ಮಾತನಾಡಿ, ದಂತಕ್ಷಯವು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಿಂದ ಉತ್ಪತ್ತಿಯಾಗುವ ಆಮ್ಲಗಳಿಂದ ಉಂಟಾಗುವ ಹಲ್ಲಿನ ದಂತಕವಚದ ನಾಶವಾಗಿದೆ. ಇದು ಸಾಮಾನ್ಯ ಸ್ಥಿತಿಯಾಗಿದ್ದು, ಸರಿಯಾಗಿ ನಿರ್ವಹಿಸದಿದ್ದರೆ ಅಸ್ವಸ್ಥತೆ, ಸೋಂಕುಗಳು ಮತ್ತು ಹಲ್ಲಿನ ನಷ್ಟಕ್ಕೂ ಕಾರಣವಾಗಬಹುದು ಬಾಯಲ್ಲಿ ಸಣ್ಣ ಆರೋಗ್ಯದ ಏರುಪೇರಾದರೂ ದಂತವೈದ್ಯರ ಸಲಹೆ ಪಡೆಯಬೇಕು
ಬ್ಯಾಕ್ಟೀರಿಯಾದ ಜಿಗುಟಾದ ಪದರವಾದ ಪ್ಲೇಕ್ ಹಲ್ಲುಗಳ ಮೇಲೆ ರೂಪುಗೊಂಡು ಆಹಾರದಿಂದ ಬರುವ ಸಕ್ಕರೆಗಳೊಂದಿಗೆ ಸಂವಹನ ನಡೆಸಿದಾಗ ಹಲ್ಲು ಕೊಳೆತ ಸಂಭವಿಸುತ್ತದೆ, ಇದು ಹಲ್ಲಿನ ರಚನೆಯನ್ನು ಸವೆಸುವ ಆಮ್ಲಗಳ ಉತ್ಪಾದನೆಗೆ ಕಾರಣವಾಗುತ್ತದೆ. ಸರಿಯಾದ ದಂತ ಆರೈಕೆಯಿಂದ ಈ ಸ್ಥಿತಿಯನ್ನು ತಡೆಗಟ್ಟಬಹುದು, ಆದರೆ ಚಿಕಿತ್ಸೆ ನೀಡದಿದ್ದರೆ, ಅದು ಗಂಭೀರ ತೊಡಕುಗಳಿಗೆ ಕಾರಣವಾಗಲಿದೆ ಈ ಬಗ್ಗೆ ಎಚ್ಚರ ವಹಿಸುವುದು ಅತಿ ಮುಖ್ಯ ಎಂದರು
ಡಾ. ಜ್ಯೋತಿ ಮಾತನಾಡಿ, ಬಿಪಿ ಇದ್ದವರು ಕಾಲಕಾಲಕ್ಕೆ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಒಳಿತು ಒಂದು ಡೈರಿಯಲ್ಲಿ ದಿನಾಂಕ ಬಿಪಿ ಚಿಕಿತ್ಸೆ ಇತ್ಯಾದಿ ವಿವರಗಳನ್ನು ಬರೆದು ಇಟ್ಟುಕೊಳ್ಳುವುದು ಇನ್ನೂ ಉತ್ತಮ 15 ದಿನಗಳಿಗೊಮ್ಮೆ ಬೆಳಗಿನ ಸಮಯದಲ್ಲಿ ಬಿಪಿ ಪರೀಕ್ಷೆ ಮಾಡಿಕೊಳ್ಳಬೇಕು ವೈದ್ಯರ ಸೂಚನೆಯಂತೆ ಮಾತ್ರೆ ಸೇವಿಸಬೇಕು ಇತ್ತೀಚಿನ ದಿನಗಳಲ್ಲಿ ಮನುಷ್ಯ ತೀರ ಒತ್ತಡದ ಬದುಕಿಗೆ ಒಳಗಾಗಿದ್ದಾನೆ ಮನುಷ್ಯ. ಸದಾ ಒಂದಲ್ಲ ಒಂದು ರೀತಿ ಒತ್ತಡದಲ್ಲಿ ಕಾರ್ಯನಿರ್ವಹಿಸಿದ್ದು ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಅಲ್ಲದೆ ಮಾನಸಿಕ ಒತ್ತಡದ ಬದುಕಿನಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಅದೇ ರೀತಿ ಮೆದುಳಿಗೆ ಅತಿಯಾದ ಕೆಲಸ ಕೊಡುತ್ತಿದ್ದೇವೆ ಇದರಿಂದ ಮೆದುಳು ಒತ್ತಡಕ್ಕೆ ಒಳಗಾಗುವುದರ ಜೊತೆಗೆ ವೈಯಕ್ತಿಕ, ಕೌಟುಂಬಿಕ, ಔದ್ಯೋಗಿಕ, ಸಾಮಾಜಿಕ, ಪ್ರಾಕೃತಿಕ, ರಾಜಕೀಯ ಸಂಬಂಧಿ ಸಮಸ್ಯೆಗಳಿಂದಲೂ ಮನಸ್ಸು ಜರ್ಜರಿತಗೊಳ್ಳುವಂತಾಗಲಿದೆ ಈ ಕರಣಕ್ಕಾಗಿ ಬಿಪಿ ಸಮತೋಲನ ಕಾಪಾಡಿಕೊಳ್ಳಬೇಕು ಎಂದರು.
ಡಾ. ನಾಗಪ್ರಿಯ ಮಾತನಾಡಿ, ಮದ್ಯಪಾನ ಮತ್ತು ಧೂಮಪಾನ ಎರಡೂ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ ಮತ್ತು ಒಳ್ಳೆಯದಲ್ಲ, ಏಕೆಂದರೆ ಅವು ಕ್ಯಾನ್ಸರ್, ಹೃದ್ರೋಗ, ಯಕೃತ್ತು ಮತ್ತು ಮೆದುಳಿಗೆ ಹಾನಿ, ಪ್ರತಿರಕ್ಷಣಾ ವ್ಯವಸ್ಥೆಯ ದುರ್ಬಲತೆ ಮತ್ತು ಅಕಾಲಿಕ ಸಾವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ, ವಿಶೇಷವಾಗಿ ಎರಡನ್ನೂ ಒಟ್ಟಿಗೆ ಸೇವಿಸಿದರೆ ಅವುಗಳ ದುಷ್ಪರಿಣಾಮಗಳು ಇನ್ನಷ್ಟು ಹೆಚ್ಚಾಗುತ್ತವೆ. ಯಾವುದೇ ಪ್ರಮಾಣದ ಮದ್ಯಪಾನ ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ, ಮತ್ತು ಧೂಮಪಾನ ಸಂಪೂರ್ಣವಾಗಿ ತ್ಯಜಿಸುವುದು ಅತಿ ಉತ್ತಮ ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಸುಮಾರು 365 ಹೆಚ್ಚು ಮಂದಿ ಆರೋಗ್ಯ ಸಂಬಂಧಿತ ಸಮಾಲೋಚನೆಯಲ್ಲಿ ಪಾಲ್ಗೊಂಡರು ಅದರಲ್ಲಿ 30ಕ್ಕೂ ಹೆಚ್ಚು ಮಂದಿಗೆ ನಾನ ಕಾಯಿಲೆಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆಗೆ ಒಳಗಾಗುವುದು ಅಲ್ಲದೆ ವಿವಿಧ ಪರೀಕ್ಷೆಗಳ ಮೂಲಕ ತಜ್ಞ ವೈದ್ಯರ ಸಲಹೆ ಪಡೆದು ಚಿಕಿತ್ಸೆಗೆ ಒಳಗಾಗಲು ಸೂಚಿಸಿದರು ಪ್ರತಿಯೊಬ್ಬರು ಬಿಸಿ ಬಿಸಿ ಆಹಾರ ಸೇವಿಸುವುದು ಅಲ್ಲದೆ ಬೀದಿ ಬದಿ ಆಹಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಅಲ್ಲಿ ಶುಚಿತ್ವದ ಕೊರತೆ, ಪದೇ ಪದೇ ಬಳಸಿದ ಎಣ್ಣೆ, ಕೃತಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ್, ಹಾಗೂ ಹೈಜೀನ್ ಇಲ್ಲದ ನೀರಿನ ಬಳಕೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು, ಇದು ಆಹಾರ ವಿಷದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಸರಿಯಾದ ಸ್ಥಳದಲ್ಲಿ, ಶುಚಿತ್ವ ಕಾಪಾಡಿಕೊಳ್ಳುವ ವ್ಯಾಪಾರಿಗಳಿಂದ ತಾಜಾ ಮತ್ತು ಆರೋಗ್ಯಕರ ಆಯ್ಕೆಗಳನ್ನು ಆರಿಸಿಕೊಳ್ಳುವ ಬಗ್ಗೆಯೂ ಆರೋಗ್ಯ ತಪಾಸಣೆಗೆ ಬಂದವರಿಗೆ ಇನ್ನಿತರ ವೈದ್ಯರು ಸಲಹೆ ನೀಡಿದರು.
ದಂತ ಹಾಗೂ ಕ್ಯಾನ್ಸರ್ ಸಂಬಂಧಿತ ರೋಗಗಳಿಗೆ ಬೀದಿಬದಿ ವ್ಯಾಪಾರಿಗಳು ತರಕಾರಿ ಮಾರಾಟಗಾರರು, ವಿವಿಧ ವಿವಿಧ ಅಂಗಡಿಯವರೆ ಹೆಚ್ಚು ಬಾದಿತರಾಗುವುದು ಕಂಡುಬರುತ್ತದೆ ಬೀಟೆಲ್ ಕ್ವಿಡ್ ಮತ್ತು ತಂಬಾಕಿನ ಅಭ್ಯಾಸದ ಬಳಕೆಯ ಪ್ರವೃತ್ತಿಯಿಂದ ಗಂಭೀರ ಕಾಯಿಲೆಗಳಿಗೆ ಜನ ತುತ್ತಾಗುತ್ತಾರೆ ಇದರಿಂದ ಎಚ್ಚರಿಕೆಯಿಂದ ಇದ್ದು ನಮ್ಮ ಆರೋಗ್ಯ ನಾವು ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಡಾ ರಮೇಶ್, ಡಾ. ನಾಗಪ್ರಿಯಾ, ಡಾ ಪೂಜಾ, ಮೌಖಿಕ ಕ್ಯಾನ್ಸರ್ ತಜ್ಞೆ, ಡಾ. ವೈಷ್ಣವಿ ಸೇರಿದಂತೆ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಸದಸ್ಯರು ಇನ್ನಿತರ ವೈದ್ಯಕೀಯ ಸಿಬ್ಬಂದಿ ಇದ್ದರು.
ಚಿತ್ರ ಸುದ್ದಿ : ಚಿಕ್ಕಬಳ್ಳಾಪುರದಲ್ಲಿ ಭಾರತೀಯ ವೈದ್ಯಕೀಯ ಸಂಘ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆ ಹಮ್ಮಿಕೊಂಡ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು.
