ಪ್ರಿಯತಮನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ...!?

Correspondent/Crime/bengaluru/SM News Desk

Apr 22, 2026 - 21:45
 0  13
ಪ್ರಿಯತಮನಿಗೆ ಬೆಂಕಿ ಹಚ್ಚಿ  ಕೊಲೆ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ...!?

ಬೆಂಗಳೂರು,ಏ.22 : ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣ ತಿರುವು ಪಡೆದುಕೊಂಡಿದ್ದು ಮಾಜಿ ಪ್ರೇಯಸಿ ಜೊತೆ ಸಂಪರ್ಕದಲ್ಲಿದ್ದು ಅಂತರ ಕಾಯ್ದುಕೊಂಡಿದ್ದರಿಂದ ಕೊಲೆಗೆ ಕಾರಣವೆಂಬುವುದು ಬ್ಯಾಡರಹಳ್ಳಿ ಠಾಣೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.ಅಂಜನಾನಗರದ ನಿವಾಸಿ ಪ್ರೇಮಾ (27) ಹಾಗೂ ತುಮಕೂರು ಮೂಲದ ಕಿರಣ್‌ (27) ಇವರಿಬ್ಬರು ರಾಜಾಜಿನಗರದಲ್ಲಿರುವ ವೋಡಾಫೋನ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಕಿರಣ್‌ ಮಾಜಿ ಪ್ರೇಯಸಿ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಪ್ರೇಮಾಗೆ ಗೊತ್ತಾಗಿದೆ. ಅಲ್ಲದೇ ಕಿರಣ್‌ ಈಕೆಯಿಂದ ಅಂತರ ಕಾಯ್ದುಕೊಂಡಿದ್ದನಂತೆ.

ಅಲ್ಲದೇ ಮಾಜಿ ಪ್ರೇಯಸಿಯ ಹುಟ್ಟು ಹಬ್ಬ ಆಚರಿಸಿ ಆಕೆಯ ಜೊತೆ ಫೋಟೋ ತೆಗೆಸಿಕೊಂಡಿರುವುದು ಪ್ರೇಮಾಗೆ ಗೊತ್ತಾಗಿ ಕಿರಣ್‌ ಜೊತೆ ಜಗಳವಾಡಿದ್ದಾಳೆ.ಪ್ರೇಮಾ ವರ್ತನೆಯಿಂದ ಕೋಪಗೊಂಡ ಕಿರಣ್‌ ಆಕೆಯ ನಂಬರ್‌ ಬ್ಲಾಕ್‌ ಮಾಡಿದ್ದಾನೆ.ಪ್ರೇಮಾ ಬೇರೆ ನಂಬರ್‌ನಿಂದ ಕಿರಣ್‌ಗೆ ಕರೆ ಮಾಡಿ ನೀನು ಹೇಳಿದ ದಿನವೇ ಮದುವೆಯಾಗೋಣ ಎಂದು ನಂಬಿಸಿದ್ದಾಳೆ.

ಪ್ರೇಮಾ ಅಷ್ಟರಲ್ಲಾಗಲೇ ಕಿರಣನ ವರ್ತನೆ ಸಹಿಸಲಾಗದೇ ಆತನ ಕೊಲೆಗೆ ಸಂಚು ರೂಪಿಸಿ ಆನ್‌ಲೈನ್‌ನಲ್ಲಿ ಅದಕ್ಕೆ ಬೇಕಾದಂತಹ ಪರಿಕರಗಳನ್ನು ಖರೀದಿಸಿದ್ದಾಳೆ. ಅಲ್ಲದೇ ಮನೆಯಲ್ಲಿ ಸೀಮೆಎಣ್ಣೆ ತಂದಿಟ್ಟುಕೊಂಡಿದ್ದಳು.ಇದ್ಯಾವುದರ ಅರಿವಿಲ್ಲದ ಕಿರಣ್‌ಗೆ ಕರೆ ಮಾಡಿ ನಿನಗೆ ವೆಸ್ಟರ್ನ್‌ ಶೈಲಿಯಲ್ಲಿ ಪ್ರಪೋಸ್‌‍ ಮಾಡುವುದಾಗಿ ಹೇಳಿ ಮನೆಗೆ ಕರೆಸಿಕೊಂಡು ಆತನ ಕಣ್ಣಿಗೆ ಬಟ್ಟೆ ಕಟ್ಟಿದ್ದಲ್ಲದೇ ಕೈಕಾಲುಗಳನ್ನು ಹಗ್ಗದಿಂದ ಬಿಗಿದು ಏಕಾಏಕಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ.

ಬೆಂಕಿಯಿಂದ ಕಿರಣ್‌ ಕಿರುಚಾಡಿಕೊಂಡು ಒದ್ದಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಆತಹತ್ಯೆ ಎಂಬ ಶಂಕೆ ವ್ಯಕ್ತವಾಗಿತ್ತು. ನಂತರ ಪೊಲೀಸರು ತನಿಖೆ ನಡೆಸಿದಾಗ ಪ್ರೇಯಸಿಯೇ ಬೆಂಕಿ ಹಚ್ಚಿ ಕೊಲೆ ಮಾಡಿರುವುದು ಗೊತ್ತಾಗಿದೆ.ಕಿರಣ್‌ ನನ್ನಿಂದ ಅಂತರ ಕಾಯ್ದುಕೊಂಡು ಮಾಜಿ ಪ್ರೇಯಸಿ ಜೊತೆ ತಿರುಗಾಡುತ್ತಿದ್ದ. ಇದರಿಂದ ಕೋಪಗೊಂಡು ನಾನೇ ಆತಹತ್ಯೆಗೆ ನಿರ್ಧರಿಸಿದ್ದೆ. ನಂತರ ಈ ರೀತಿ ಮಾಡಿದೆ ಎಂದು ಆರೋಪಿ ಪ್ರೇಮಾ ತಿಳಿಸಿದ್ದಾಳೆ.ಪೊಲೀಸರು ಆಕೆಯನ್ನು ಬಂಧಿಸಿ, ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.