ಶ್ರೀ ಮುಕ್ತಿ ನಾಗದೇವತೆ ಅಮ್ಮನವರ ಸನ್ನಿಧಿಯಲ್ಲಿ 3ನೇ ವರ್ಷದ ವಾರ್ಷಿಕೋತ್ಸವ
Correspondent/Malur/Srinath/SM News Desk
ಮಾಲೂರು: ತಾಲ್ಲೂಕಿನ ಸುಪ್ರಸಿದ್ಧ ಪುಣ್ಯಕ್ಷೇತ್ರವಾದ ಚಿಕ್ಕ ತಿರುಪತಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮುಕ್ತಿ ನಾಗದೇವತೆ ಅಮ್ಮನವರ ಸನ್ನಿಧಿಯಲ್ಲಿ 3ನೇ ವರ್ಷದ ವಾರ್ಷಿಕೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಆಚರಿಸಲಾಯಿತು.ಮಹಾ ಶಿವರಾತ್ರಿ ಹಬ್ಬದ ಪವಿತ್ರ ಸಂದರ್ಭದಲ್ಲೇ ದೇವಿಯ ವಾರ್ಷಿಕೋತ್ಸವವು ಜರುಗಿರುವುದು ವಿಶೇಷವಾಗಿದ್ದು ಈ ದಿನದ ಅಂಗವಾಗಿ ದೇವಸ್ಥಾನದಲ್ಲಿ ತಾಯಿ ಶ್ರೀ ಮುಕ್ತಿ ನಾಗದೇವತೆಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರಿಕ ಪೂಜೆಗಳನ್ನು ನೆರವೇರಿಸಲಾಯಿತು.
ನಂತರ ದೇವಿಯ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ರಾಜಭೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಭವ್ಯವಾಗಿ ಮೆರವಣಿಗೆ ಮಾಡಲಾಯಿತು.ಲೋಕಕಲ್ಯಾಣಾರ್ಥವಾಗಿ ಕ್ಷೇತ್ರದಲ್ಲಿ ಚಂಡಿಕಾಯಾಗ ಹಾಗೂ ವಿವಿಧ ಹೋಮ-ಹವನಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ದೇವಸ್ಥಾನದ ಇತಿಹಾಸದ ಕುರಿತು ಮಾತನಾಡಿದ ಅರ್ಚಕ ಭರದ್ವಾಜ್ ಕೃಷ್ಣ ದೀಕ್ಷಿತ್ ಅವರು ಶ್ರೀ ಮುಕ್ತಿ ನಾಗದೇವತೆಯು ಈ ಹಿಂದೆ ದೇವಸ್ಥಾನದ ನಿರ್ಮಾತೃಗಳ ಕನಸಿನಲ್ಲಿ ಬಂದು ತಾನು ಇಲ್ಲಿ ನೆಲೆಸಿರುವುದಾಗಿ ಸೂಚಿಸಿದ್ದರು.
ತಾಯಿಯ ಇಚ್ಛೆಯಂತೆ (ಟಿಬಿಕೆ) ಕೃಷ್ಣಪ್ಪ ಕುಟುಂಬದವರು ಇಲ್ಲಿ ಸುಂದರವಾದ ಆಲಯವನ್ನು ನಿರ್ಮಿಸಿ, ವಿಗ್ರಹ ಪ್ರತಿಷ್ಠಾಪನೆ ಮಾಡಿದರು. ಅಂದಿನಿಂದ ಸತತ ಮೂರು ವರ್ಷಗಳಿಂದ ವಾರ್ಷಿಕೋತ್ಸವದ ಜೊತೆಗೆ ನಿರಂತರವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಹಾಗೇ ಶ್ರೀ ಮುಕ್ತಿ ನಾಗದೇವತೆಯ ಮಹಿಮೆಯು ಅಪಾರವಾಗಿದ್ದು, ಈ ಸನ್ನಿಧಿಗೆ ಬಂದು ಹರಕೆ ಹೊತ್ತ ಭಕ್ತರ ಸಂಕಷ್ಟಗಳು ದೂರವಾಗುತ್ತಿವೆ ಎಂಬ ನಂಬಿಕೆ ಗಾಢವಾಗಿದೆ. ವಿಶೇಷವಾಗಿ ಆರೋಗ್ಯ ಹಾಗೂ ಚರ್ಮರೋಗ ನಿವಾರಣೆ, ಸಂತಾನ ಭಾಗ್ಯ ಹಾಗೂ ವಿವಾಹ ಯೋಗ, ಕೌಟುಂಬಿಕ ಸಮಸ್ಯೆಗಳ ಪರಿಹಾರ. ತಾಯಿಯ ಸನ್ನಿಧಿಗೆ ಬರುವ ನೂರಾರು ಭಕ್ತರು ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ನಂಬಿ ಬಂದವರ ಬೇಡಿಕೆಗಳನ್ನು ತಾಯಿ ಈಡೇರಿಸುತ್ತಿದ್ದಾಳೆ. ಎಲ್ಲರಿಗೂ ಆ ತಾಯಿ ಉತ್ತಮ ಆರೋಗ್ಯ, ಆಯಸ್ಸು ಮತ್ತು ಐಶ್ವರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಟಿಬಿಕೆ ಕುಟುಂಬದ ಸದಸ್ಯರು, ಗ್ರಾಮದ ಮುಖಂಡರು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
