ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಹಸ್ತಕ್ಷೇಪ ಹೈಕೋರ್ಟ್ ಗಂಭೀರವಾಗಿ ಪ್ರಶ್ನೆ
Correspondent/Karnataka/SM News Desk
ಬೆಂಗಳೂರು,ಮಾ.20 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪ್ರಶ್ನೆ ಮಾಡಿದೆ. ಸಿಎಂ ಕಚೇರಿಯಿಂದ ವರ್ಗಾವಣೆ ವಿಚಾರವಾಗಿ ಬೆಸ್ಕಾಂನ ಸಹಾಯಕ ಅಭಿಯಂತರ (ಎಇ) ಚೇತನ್ ಎಸ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಹಾಗೂ ಟಿ.ಎಂ.ನದಾಫ್ ಅವರಿದ್ದ ದ್ವಿಸದಸ್ಯ ಪೀಠವು ಗ್ರೂಪ್ ಬಿ ಅಥವಾ ಸಿ ಉದ್ಯೋಗಿಗಳ ವರ್ಗಾವಣೆ ವಿಚಾರದಲ್ಲಿ ಅಸಮಾಧಾನ ಹೊರಹಾಕಿದೆಸಿ
ಎಂ ಸಿದ್ದರಾಮಯ್ಯಗೆ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ. ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೇ ಬಿಡಬೇಕು. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆಯ ಮನವಿ ಸ್ವೀಕರಿಸಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದು, ಹೈಕೋರ್ಟ್‌ನ ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗೆ ಕಳುಹಿಸಲು ಸೂಚನೆ ನೀಡಿದೆ.
ಪ್ರಕರಣ ಸಂಬಂಧ ಸಿಎಂ ನೀಡುವ ವರ್ಗಾವಣೆ ಶಿಫಾರಸುಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದಲೂ ನಿಲುವು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯದರ್ಶಿ, ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಾಗಿದ್ದು, ಅಂತಿಮ ಆದೇಶವನ್ನು ಸಂಬಂಧಪಟ್ಟ ಇಲಾಖೆ ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದರು.ಇಂಧನ ಇಲಾಖೆಯ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸಿಎಂ ಕಚೇರಿ ಮುಂದಾಗಿತ್ತು.
ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆ ಆಡಳಿತದಲ್ಲಿ ತೀವ್ರ ಹಸ್ತಕ್ಷೇಪ ಮಾಡುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಸಚಿವ ಕೆ.ಜೆ.ಜಾರ್ಜ್ ಸಿಎಂ ನಿವಾಸಕ್ಕೆ ತೆರಳಿ ಪ್ರಶ್ನಿಸಿದ್ದರು. ಅಲ್ಲದೇ ರಾಜೀನಾಮೆ ಬಗ್ಗೆ ಸಹ ಪ್ರಸ್ತಾಪಿಸಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಜಾರ್ಚ್ ಅವರನ್ನು ಸಮಾಧಾನಪಡಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.
ಹೀಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಎಲ್ಲಾ ಇಲಾಖೆಗಳಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಮತ್ತೊಂದೆಡೆ, ಇಂಧನ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿಯೂ ಸಿಎಂ ಕಚೇರಿ ಪಾತ್ರ ವಹಿಸಿದ್ದ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿವೆ.ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಲಾಖೆಗಳ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.ಈ ಎಲ್ಲಾ ಬೆಳವಣಿಗೆಗಳ ನಡುವೆ ಹೈಕೋರ್ಟ್ ನೀಡಿದ ಈ ತೀಕ್ಷ್ಣ ಸೂಚನೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
