ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ತಾತ್ಕಾಲಿಕವಾಗಿ ಮುಂದುವರಿಸುವ ಅಧಿಸೂಚನೆ...!?

Correspondent/Political/SM News Desk

Feb 28, 2026 - 22:43
Feb 28, 2026 - 22:48
 0  11
ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ತಾತ್ಕಾಲಿಕವಾಗಿ ಮುಂದುವರಿಸುವ ಅಧಿಸೂಚನೆ...!?

ಬೆಂಗಳೂರು, ಫೆ.28: ಹಾಲಿ ಅಧಿಕಾರದಲ್ಲಿರುವ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಕಾಂಗ್ರೆಸ್‌‍ ಸರ್ಕಾರದಲ್ಲಿನ ನಾಯಕತ್ವದ ಗೊಂದಲದಿಂದಾಗಿ ನಿಗಮ ಮಂಡಳಿಗಳ ನೇಮಕಾತಿಗೂ ಗ್ರಹಣ ಹಿಡಿದಿದ್ದು,  ತಾತ್ಕಾಲಿಕವಾಗಿ ಮುಂದುವರಿಸುವ ಅಧಿಸೂಚನೆ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಅಧಿಸೂಚನೆ ಹೊರಡಿಸಿದ್ದು, ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿರುವ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ನಾಮನಿರ್ದೇಶನಗೊಂಡ ಅಧ್ಯಕ್ಷರುಗಳ ಮುಕ್ತಾಯಗೊಂಡ ಹಾಗೂ ಮುಕ್ತಾಯಗೊಳ್ಳಲಿರುವ ಅವಧಿಯನ್ನು ಮುಂದಿನ ಆದೇಶದವರೆಗೆ ಮುಂದುವರೆಸಿರುವುದಾಗಿ ತಿಳಿಸಲಾಗಿದೆ. ಆಡಳಿತ ಇಲಾಖೆಯು ಸಂಬಂಧಿಸಿದ ಅಧಿನಿಯಮ ಮತ್ತು ನಿಯಮಗಳ ಅನುಸಾರ ಅಧ್ಯಕ್ಷರು ಕಾರ್ಯನಿರ್ವಹಿಸಲು ತಕ್ಷಣದಿಂದಲೇ ಅಧಿಸೂಚನೆ ಹೊರಡಿಸಬೇಕು ಎಂದು ತಿಳಿಸಿದೆ.

ಈ ಮೂಲಕ ಮೊದಲ ಅವಧಿಗೆ ನೇಮಕಗೊಂಡು, ಅಧಿಕಾರಾವಧಿ ಮುಕ್ತಾಯದ ಹಂತದಲ್ಲಿದ್ದವರು ಬಂಪರ್‌ ಅವಕಾಶ ಪಡೆದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ತಿಂಗಳು ವಿಳಂಬವಾಗಿ ನಿಗಮ - ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿತ್ತು. ಆ ಅಧಿಕಾರವಧಿ ಬಹುತೇಕ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಹೊಸ ಅಧ್ಯಕ್ಷರ ಪಟ್ಟಿ ಅಂತಿಮಗೊಳ್ಳದೆ ಇರುವುದರಿಂದ ಹಳಬರನ್ನೇ ತಾತ್ಕಾಲಿಕವಾಗಿ ಮುಂದುವರೆಸುವ ಅಧಿಸೂಚನೆ ಹೊರಡಿಸಲಾಗಿದೆ.

ಮೊದಲು ನೇಮಕವಾಗಿದ್ದ ಬಹಳಷ್ಟು ಮಂದಿ ಅಧ್ಯಕ್ಷರಲ್ಲಿ ಶಾಸಕರು ಇದ್ದಾರೆ. ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬದಲಾವಣೆ ಮಾಡಿದ್ದಾರೆ ಬಂಡಾಯ ಎದುರಾಗುವ ಅಥವಾ ಶಾಸಕರು ನಿಷ್ಠೆ ಬದಲಿಸುವ ಮುನ್ಸೂಚನೆಯಿದೆ. ನಿಗಮ ಮಂಡಳಿಗಳ ಅಧ್ಯಕ್ಷರನ್ನು ಕಾಲಾವಧಿಯ ಆಧಾರದಲ್ಲಿ ಬದಲಾವಣೆ ಮಾಡುವುದಾದರೆ ಸಚಿವರನ್ನು ಎರಡುವರೆ ವರ್ಷಗಳ ಷರತ್ತಿನ ಮೇಲೆ ಬದಲಾವಣೆ ಮಾಡಿ ಎಂಬ ಬೇಡಿಕೆ ಆಡಳಿತ ಪಕ್ಷದ ಶಾಸಕರಿಂದಲೇ ಹುಟ್ಟಿಕೊಳ್ಳುವ ಅಪಾಯ ಇದೆ. ಹಾಗಾಗಿ ಸದ್ಯಕ್ಕೆ ನಿಗಮ ಮಂಡಳಿಗಳ ಅಧ್ಯಕ್ಷರ ಬದಲಾವಣೆಯ ಗೋಜಿಗೆ ಕೈ ಹಾಕದಿರಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಎಲ್ಲದಕ್ಕಿಂತ ಪ್ರಮುಖವಾಗಿ ಹೊಸದಾಗಿ ಅಧ್ಯಕ್ಷರುಗಳನ್ನು ನೇಮಿಸಲು ಪಟ್ಟಿ ಇನ್ನೂ ಸಿದ್ಧಗೊಂಡಿಲ್ಲ. ಈ ಹಿಂದಿನ ಅವಧಿಗೆ ಅಧ್ಯಕ್ಷರನ್ನಷ್ಟೇ ನೇಮಿಸಲಾಗಿತ್ತು. ಸದಸ್ಯರು ಮತ್ತು ನಿರ್ದೇಶಕರ ನೇಮಕವಾಗಿರಲಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ಸಮಿತಿ ಒಂದನ್ನು ರಚಿಸಿ ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತು ನಿರ್ದೇಶಕರ ನೇಮಕಕ್ಕೆ ಪಟ್ಟಿಯನ್ನು ಪಡೆಯಲಾಗಿತ್ತು. ಪರಮೇಶ್ವರ್‌ ಅವರು ಪಕ್ಷ ನಿಷ್ಠರು, ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರು, ಸ್ಥಳೀಯವಾಗಿ ಪ್ರಭಾವಿಗಳಾಗಿರುವ ನಾಯಕರುಗಳನ್ನು ಗುರುತಿಸಿ ಪಟ್ಟಿ ಸಿದ್ಧ ಪಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಸಲ್ಲಿಸಿದ್ದರು. ಆದರೆ ಎರಡುವರೆ ವರ್ಷ ಕಳೆದರೂ ಆ ಪಟ್ಟಿಯಂತೆ ನೇಮಕಾತಿಯಾಗಲಿಲ್ಲ.

ಕೆಳಹಂತದ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳು ಮತ್ತು ಪ್ರಾಧಿಕಾರದಲ್ಲಿ ಸದಸ್ಯರು ಮತ್ತು ನಿರ್ದೇಶಕರಾಗುವ ಯೋಗ ಕೂಡಿ ಬಂದಿರಲಿಲ್ಲ. ಇದು ಕಾಂಗ್ರೆಸ್‌‍ ಪಕ್ಷದ ಸಂಘಟನೆಯ ಮೇಲೆ ಬಾರಿ ಪರಿಣಾಮ ಬೀರಿದೆ.ಮುಂದಿನ ಚುನಾವಣೆಯಲ್ಲಿ ಯಾವ ಪುರುಷಾರ್ಥಕ್ಕೆ ನಾವು ಕೆಲಸ ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳಹಂತದ ಕಾರ್ಯಕರ್ತರು ಕೇಳಲಾರಂಭಿಸಿದ್ದಾರೆ. ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ನೇಮಕವಾದವರು ನಿರ್ಗಮಿಸಬೇಕಾದ ಪರಿಸ್ಥಿತಿ ಇತ್ತು. ಹೊಸಬರಿಗೆ ಅವಕಾಶ ಸಿಗಬೇಕಿತ್ತು ಅಲ್ಲೂ ಎಡವಟ್ಟಾಗಿದೆ. ಎರಡನೇ ಅವಧಿಯಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದವರಿಗೆ ಭಾರೀ ನಿರಾಶೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಡುವೆ ನಾಯಕತ್ವದ ಬದಲಾವಣೆ ವಿಚಾರವಾಗಿ ತಗಾದೆಗಳಿವೆ. ಇದರ ಪರಿಣಾಮವಾಗಿ ಸಿದ್ದರಾಮಯ್ಯ ಅವರು ಸಿದ್ಧಪಡಿಸಿದ ಪಟ್ಟಿಯನ್ನು ಡಿ.ಕೆ. ಶಿವಕುಮಾರ್‌ ಅವರು ಒಪ್ಪುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಅವರ ಪಟ್ಟಿಯನ್ನು ಸಿದ್ದರಾಮಯ್ಯ ಅಂಗೀಕರಿಸುತ್ತಿಲ್ಲ. ಈ ಇಬ್ಬರು ಸಿದ್ದಪಡಿಸಿದ್ದ ಪಟ್ಟಿಗೆ ಹೈಕಮಾಂಡ್‌ ತಗಾದೆ ತೆಗೆಯುತ್ತಿದೆ. ಹೀಗಾಗಿ ನಿಗಮ ಮಂಡಳಿಗಳ ನೇಮಕಾತಿಗೂ ಗ್ರಹಣ ಹಿಡಿದಿದೆ.

ಸಿದ್ದರಾಮಯ್ಯ ಅವರ ಸರ್ಕಾರ ತಾತ್ಕಾಲಿಕ ಆದೇಶವನ್ನು ಹೊರಡಿಸುವ ಮೂಲಕ ಪಕ್ಷದಲ್ಲಿರುವ ಹುಳುಕುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬ ಕುಹಕಗಳು ಕೇಳಿ ಬಂದಿವೆ.
ಮುಂದಿನ ಐದಾರು ತಿಂಗಳಲ್ಲಿ ನಗರ ಹಾಗೂ ಸ್ಥಳೀಯ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಆ ಸಂದರ್ಭದಲ್ಲಿ ಪಕ್ಷದ ಕೆಲಸ ಮಾಡಬೇಕಾದ ಕಾರ್ಯಕರ್ತರು ನಿರುತ್ಸಾಹಕ್ಕೆ ಒಳಗಾದರೆ ಆಡಳಿತ ರೂಢ ಕಾಂಗ್ರೆಸ್‌‍ ಪಕ್ಷವೇ ಸೋಲು ಕಂಡು ಮುಜುಗರಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಪರಿಸ್ಥಿತಿ ಎದುರಾಗಲಿದೆ.

ಎಲ್ಲಾ ದೃಷ್ಟಿಕೋನಗಳಿಂದಲೂ ಅಳೆದುತೂಗಿ ಸಿದ್ದರಾಮಯ್ಯ ಅವರು ಹಾಲಿ ಇರುವ ಸದಸ್ಯರನ್ನು ಅಧಿಕಾರದಲ್ಲಿ ಮುಂದುವರೆಸುವ ನಿರ್ಣಯಕ್ಕೆ ಬಂದಿದ್ದಾರೆ. ಇದು ಆಕಾಂಕ್ಷಿಗಳ ಅಸಮಧಾನಕ್ಕೆ ಕಾರಣವಾಗಿದೆ.