ಆರ್‌ಪಿಎಸ್‌ ವಿಜಯೋತ್ಸವಕ್ಕೆ ಸ್ಯಾಂಡಲ್‌ವುಡ್‌ ಮೆರುಗು ,ಆರ್‌ಪಿಎಸ್‌ ಪ್ರೇರಣಾ ಪುರಸ್ಕಾರ :  

Correspondent/Anekal/Mallikarjun/SM News Desk

Feb 19, 2026 - 08:21
 0  6
ಆರ್‌ಪಿಎಸ್‌ ವಿಜಯೋತ್ಸವಕ್ಕೆ ಸ್ಯಾಂಡಲ್‌ವುಡ್‌ ಮೆರುಗು ,ಆರ್‌ಪಿಎಸ್‌ ಪ್ರೇರಣಾ ಪುರಸ್ಕಾರ :   

ಆನೇಕಲ್ : ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಾಲಾ ಆಡಳಿತ ಮಂಡಳಿಯ ಬೋಧಕ ಮತ್ತು ಬೋದಕೇತರ ಸಿಬ್ಬಂದಿಗಳಿಗೆ ಮನರಂಜನೆ ನೀಡುವುದರ ಜೊತೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಸಲುವಾಗಿ ರೈನ್‌ ಬೋ ಪಬ್ಲಿಕ್‌ ಶಾಲೆಯ ವಾರ್ಷಿಕೋತ್ಸವ ಆರ್‌ಪಿಎಸ್‌ ವಿಜಯೋತ್ಸವದಲ್ಲಿ ಪ್ರೇರಣಾ ಪುರಸ್ಕಾರ ಕಾರ್ಯಕ್ರಮವನ್ನು ಫೆ.21ರ ಶನಿವಾರ 3ಗಂಟೆಗೆ ಆಯೋಜಿಸಲಾಗಿದೆ.

ಆರ್‌ಪಿಎಸ್‌ ಪ್ರೇರಣಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆನೇಕಲ್‌ ತಾಲ್ಲೂಕಿನ 100 ಮಂದಿ ಪ್ರಗತಿಪರ ರೈತರು, ಆನೇಕಲ್‌ ತಾಲ್ಲೂಕಿನ ನಿವೃತ್ತ ಯೋಧರು- ಯುದ್ಧಗಳಲ್ಲಿ ಮೃತರಾದ ಯೋಧರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿಜ್ಞಾನ ತಂತ್ರಜ್ಞಾನ-ಕಲೆ-ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಆನೇಕಲ್‌ ತಾಲ್ಲೂಕಿನ ಸುಪ್ತ ಪ್ರತಿಭೆಗಳು, ಶಿಕ್ಷಣ ಕ್ರಾಂತಿಗೆ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು, ಅನಾಥಾಶ್ರಮ ಮತ್ತು ವೃದ್ಧಾಶ್ರಮ ನಡೆಸುವವರು ಸೇರಿದಂತೆ ಒಟ್ಟು 250 ಮಂದಿ ಸಾಧಕರಿಗೆ ಮತ್ತು ಪ್ರಗತಿಪರ ರೈತರಿಗೆ ಆರ್‌ಪಿಎಸ್‌ ಪ್ರೇರಣಾ ಪುರಸ್ಕಾರ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಆರ್‌ಪಿಎಸ್‌ ವಿಜಯೋತ್ಸವವನ್ನು ಸಾಮಾಜಿಕ ಕಾರ್ಯಕ್ರಮವಾಗಿ ಮಾಡಬೇಕು ಮತ್ತು ರೈತರು, ಯೋಧರು, ಸಾಧಕರಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ದೊರೆಯಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಆನೇಕಲ್‌ ತಾಲ್ಲೂಕಿನ ಸುಪ್ತ ಪ್ರತಿಭೆಗಳಿಗೆ ವೇದಿಕೆ ನೀಡಲಾಗುತ್ತಿದೆ. ಪೋಷಕರು, ಮಕ್ಕಳು ಶನಿವಾರ ಮಧ್ಯಾಹ್ನ 2 ಗಂಟೆಗೆ ಶಾಲಾ ಆವರಣದಲ್ಲಿ ಹಾಜರಾಗಬೇಕು ಎಂಬುದು ನಮ್ಮ ಕೋರಿಕೆಯಾಗಿದೆ. ಶಾಸಕ ಬಿ.ಶಿವಣ್ಣ, ತಮಿಳುನಾಡು ಹೊಸೂರು ಶಾಸಕ ವೈ.ಪ್ರಕಾಶ್‌, ನಾಗಲಾಪುರ ಮಠದ ತೇಜೇಶಲಿಂಗ ಸ್ವಾಮೀಜಿ, ಲೇಖಕ ಬಾಗೂರು ಮಾರ್ಕಂಡರಾವ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಸಾಂಸ್ಕೃತಿಕ ಕಲಾ ತಂಡಗಳ ಹಳ್ಳಿ ಜಾತ್ರೆ : ಗ್ರಾಮೀಣ ಪ್ರದೇಶದಲ್ಲಿನ ಹಬ್ಬ ಹರಿದಿನಗಳು, ಜಾತ್ರೆಗಳು ಮತ್ತು ಜಾನಪದ ಕಲೆಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ಶನಿವಾರ ಮಧ್ಯಾಹ್ನ 2ರಿಂದ ಹಳ್ಳಿ ಜಾತ್ರೆ ಗ್ರಾಮೀಣ ಸೊಗಡು ಕಾರ್ಯಕ್ರಮವನ್ನು ಆರ್‌ಪಿಎಸ್‌ ವಿಜಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದೆ. ವೀರಗಾಸೆ, ಡೊಳ್ಳುಕುಣಿತ, ನಂದಿಧ್ವಜ, ಪೂಜಾ ಕುಣಿತ ಸೇರಿದಂತೆ 20ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಹಳ್ಳಿ ಜಾತ್ರೆ ಗ್ರಾಮೀಣ ಸೊಗಡು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಳ್ಳಿಕಾರ್‌ ರಾಸುಗಳ ಪ್ರದರ್ಶನ, ವರ್ತೂರು ಸಂತೋಷ್‌ ಅವರು ಹಳ್ಳಿ ಜಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

ಆರ್‌ಪಿಎಸ್‌ ವಿಜಯೋತ್ಸವಕ್ಕೆ ಸ್ಯಾಂಡಲ್‌ವುಡ್‌ ಮೆರುಗು : ಆರ್‌ಪಿಎಸ್‌ ವಿಜಯೋತ್ಸವದಲ್ಲಿ ಸ್ಯಾಂಡಲ್‌ವುಡ್‌ನ 10ಕ್ಕೂ ಹೆಚ್ಚು ನಟ ನಟಿಯರು ಭಾಗಿಯಾಗಲಿದ್ದಾರೆ. ಸಂಜೆ 4ಗಂಟೆಗೆ ಸ್ಯಾಂಡಲ್‌ವುಡ್‌ನ ನಿಶ್ವಿಕ ನಾಯ್ಡು, ಡಾರ್ಲಿಂಗ್‌ ಕೃಷ್ಣ, ಮಿಲನ ನಾಗರಾಜು, ಮೇಘಾ ಶೆಟ್ಟಿ, ವಸಿಷ್ಠ ಸಿಂಹ, ಹರಿಪ್ರಿಯಾ ಸೇರಿದಂತೆ ವಿವಿಧ ನಟ ನಟಿಯರು ಭಾಗಿಯಾಗಲಿದ್ದಾರೆ. ಅತ್ತಿಬೆಲೆ ಸುತ್ತಮುತ್ತಲಿನ ಎಲ್ಲಾ ನಾಗರಿಕರು ಆರ್‌ಪಿಎಸ್‌ ವಿಜಯೋತ್ಸವದಲ್ಲಿ ಭಾಗಿಯಾಗಬೇಕು ಎಂದು ಪತ್ರಿಕಾಗೋಷ್ಠಿ ಮೂಲಕ ಕೋರಲಾಗಿದೆ.