ಒಂದೇ ಭಾರತ ಶ್ರೇಷ್ಠ ಭಾರತ - ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Correspondent/Anekal/Mallikarjun/SM News Desk
ಆನೇಕಲ್ : ಒಂದೇ ಭಾರತ ಶ್ರೇಷ್ಠ ಭಾರತ ಹಾಗಾಗಿ ಆತ್ಮ ನಿರ್ಭರ ಭಾರತವನ್ನು ಸದೃಢವಾಗಿ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು. ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಶಾರದಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಯಶಸ್ಸು ಗಳಿಸಲು ಶಿಕ್ಷಣ ಅತ್ಯಂತ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ಬಳಸಿಕೊಳ್ಳಬೇಕು. ಸಮಾಜದ ಸಬಲೀಕರಣಕ್ಕಾಗಿ ಪ್ರತಿಯೊಬ್ಬರೂ ಉನ್ನತ ಶಿಕ್ಷಣವನ್ನು ಪಡೆಯಬೇಕು. ಭವಿಷ್ಯದ ನಾಗರೀಕರನ್ನು ಸಜ್ಜುಗೊಳಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ವಿಕಸಿತ ಭಾರತದ ನಿರ್ಮಾಣಕ್ಕೆ ತಮ್ಮ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಮತ್ತು ಸಮಾಜವನ್ನು ಸಬಲೀಕರಣ ಗೊಳಿಸಬೇಕು ಎಂದರು.
ಭಾರತವು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ನೆಲವಾಗಿದೆ. ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ವಿಶ್ವಕ್ಕೆ ನೀಡಿದ ಹೆಗ್ಗಳಿಕೆ ಭಾರತಕ್ಕೆ ಸಲ್ಲುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಮ ಸಮಾಜದ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು. ಬೌದ್ಧಿಕ ಶಕ್ತಿಯ ಮೂಲಕ ಆತ್ಮ ನಿರ್ಭರ ಭಾರತ ನಿರ್ಮಿಸಬೇಕು ಎಂದರು. ಶಾಸಕ ಬಿ.ಶಿವಣ್ಣ ಮಾತನಾಡಿ ಶಿಕ್ಷಣ ಹೆಚ್ಚಾಗುತ್ತಿದ್ದಂತೆ ವೃದ್ಧಾಶ್ರಮಗಳು ಸಹ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ವಿದ್ಯಾರ್ಥಿಗಳು ಮತ್ತು ಯುವಕರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರು ತಮ್ಮ ತಂದೆ ತಾಯಿಯನ್ನು ಮರೆಯಬಾರದು. ಸುಸಜ್ಜಿತ ಕ್ರೀಡಾ ಅಂಕಣಗಳುಳ್ಳ ಕ್ರೀಡಾ ಸಂಕಿರಣವನ್ನು ಉದ್ಘಾಟಿಸುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ಬೆಂಬಲ ನೀಡಿರುವುದು ಶ್ಲಾಘನೀಯ ಎಂದರು. ತಮಿಳುನಾಡು ಥಳಿ ವಿಧಾನಸಭಾ ಕ್ಷೇತ್ರದ ಶಾಸಕ ರಾಮಚಂದ್ರನ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಶಾರದಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗೇಶ್ ಕೃಷ್ಣಪ್ಪ ಇದ್ದರು.
