ಬುರ್ಖಾ ಹಾಕಿಕೊಂಡು ಕಂಪ್ಯೂಟರ್‌ ಅಂಗಡಿ ಕಳ್ಳತನ ಅಪ್ಪ , ಮಗನ ಬಂಧನ 35 ಲಕ್ಷ ಮೌಲ್ಯದ ಬೆಳ್ಳಿ ,24.60 ಲಕ್ಷ ಮೌಲ್ಯದ ಮಾಲು ವಶ

Correspondent/Bengaluru/SM News Desk

Mar 20, 2026 - 08:21
Mar 21, 2026 - 15:30
 0  22
ಬುರ್ಖಾ ಹಾಕಿಕೊಂಡು ಕಂಪ್ಯೂಟರ್‌ ಅಂಗಡಿ ಕಳ್ಳತನ ಅಪ್ಪ , ಮಗನ ಬಂಧನ 35 ಲಕ್ಷ ಮೌಲ್ಯದ ಬೆಳ್ಳಿ ,24.60 ಲಕ್ಷ ಮೌಲ್ಯದ ಮಾಲು ವಶ

ಬೆಂಗಳೂರು,ಮಾ.18-ಅರಮನೆ ಮೈದಾನ ಮತ್ತು ಇನ್ನಿತರ ಕಡೆಗಳಲ್ಲಿರುವ ಕಲ್ಯಾಣ ಮಂಟಪಗಳಿಗೆ ಹೋಗಿ ಚಿಕ್ಕಮಕ್ಕಳನ್ನು ಗುರಿಯಾಗಿಸಿಕೊಂಡು ಸಲುಗೆಯಿಂದ ಮಾತನಾಡಿಸಿ ಅವರು ಧರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ 1.20 ಲಕ್ಷ ರೂ. ನಗದು ಸೇರಿದಂತೆ 42.38 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಕಳವು ಮಾಡಿದ್ದ ಆಭರಣಗಳನ್ನು ಮಾರಿ ಖರೀದಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ಎರಡು ಕಾರುಗಳನ್ನು ಸಹ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಂದ್ರಹಳ್ಳಿಯ ನಿವಾಸಿ ಬಾಬು ಅಲಿಯಾಸ್‌‍ ಪಲ್ಸರ್‌ ಬಾಬು (45) ಬಂಧಿತ ಆರೋಪಿ. ಎಲೆಕ್ಟ್ರಾನಿಕ್‌ ಸಿಟಿ 2ನೇ ಹಂತದ ನಿವಾಸಿಯೊಬ್ಬರು ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮಕ್ಕೆ ಪತ್ನಿ ಹಾಗೂ ಮಗಳೊಂದಿಗೆ ಹೋಗಿದ್ದಾಗ ಮಗಳು ಧರಿಸಿದ್ದ ಪೆಂಡೆಂಟ್‌ ಇದ್ದ ಗೋಲ್‌್ಡ ಪ್ಲೇಟೆಡ್‌ ಸಿಲ್ವರ್‌ ಚೈನ್‌ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅರಮನೆ ಮೈದಾನ ಸುತ್ತ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮದುವೆ ಮಂಟಪಗಳಲ್ಲಿ ಮಕ್ಕಳ ಆಭರಣಗಳನ್ನು ಹಾಗೂ ವಾಹನಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ, ಕಳವು ಮಾಡಿದ್ದ ಚಿನ್ನಾಭರಣಗಳು, ಹಣ, ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳನ್ನು ಅಂದ್ರಹಳ್ಳಿಯ ಚತ್ರನಗರದಲ್ಲಿರುವ ತನ್ನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಮನೆ ಸಮೀಪದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ಹೇಳಿದ್ದಾನೆ.
ಆರೋಪಿಯ ಮಾಹಿತಿಯಂತೆ 132 ಗ್ರಾಂ ಚಿನ್ನಾಭರಣ, 1.20 ಲಕ್ಷ ನಗದು, 7 ಮೊಬೈಲ್‌ಗಳು, 2 ಲ್ಯಾಪ್‌ಟಾಪ್‌, 2 ಕಾರು,4 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ಪ್ರದೀಪ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಆರೋಪಿ ಬಂಧನದಿಂದ ಸದಾಶಿವನಗರ ಠಾಣೆಯ 3, ಜಾಲಹಳ್ಳಿ, ವರ್ತೂರು, ಬಾಗಲಗುಂಟೆ ಹಾಗೂ ಹೆಣ್ಣೂರು ಪೊಲೀಸ್‌‍ ಠಾಣೆಯ ತಲಾ 1 ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು ಪತ್ತೆಯಾಗಿರುತ್ತವೆ.

ಬುರ್ಖಾ ಹಾಕಿಕೊಂಡು ಕಂಪ್ಯೂಟರ್‌ ಅಂಗಡಿ ಕಳ್ಳತನ ಅಪ್ಪ , ಮಗನ ಬಂಧನ

ಕೆಲಸದಿಂದ ತೆಗೆದು ಹಾಕಿದ್ದ ಕೋಪಕ್ಕೆ ಬುರ್ಖಾ ಹಾಕಿಕೊಂಡು ಹೋಗಿ ಕಂಪ್ಯೂಟರ್‌ ಅಂಗಡಿಯಲ್ಲಿ ಕಳವು ಮಾಡಿದ್ದ ಅಪ್ಪ-ಮಗನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ 2.29 ಲಕ್ಷ ರೂ. ನಗದು ಸೇರಿದಂತೆ 80 ಲಕ್ಷ ಮೌಲ್ಯದ ಕಂಪ್ಯೂಟರ್‌ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಗವಾರದ ನಿವಾಸಿ ಮಂಜುನಾಥ (48) ಮತ್ತು ಅವರ ಮಗ ಹೇಮಂತ್‌ (22) ಬಂಧಿತ ಆರೋಪಿಗಳು.ತಮಿಳುನಾಡು ಮೂಲದ ರಘು ಎಂಬುವವರು 15 ವರ್ಷದ ಹಿಂದೆ ಬಿಸ್ನೆಸ್‌‍ ಮಾಡಲು ಬೆಂಗಳೂರಿಗೆ ಬಂದು ನಾಗವಾರದಲ್ಲಿರುವ ಮಂಜುನಾಥ್‌ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ನಂತರದ ದಿನಗಳಲ್ಲಿ ರಘು ಅವರು ಆದಾಯದಲ್ಲಿ ಏಳಿಗೆ ಹೊಂದಿ ನಾಗವಾರದ ಟಿ.ಚನ್ನಯ್ಯ ಲೇಔಟ್‌ನಲ್ಲಿ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ.ಹೆಚ್‌.ಬಿಆರ್‌ ಲೇಔಟ್‌ನ 4ನೇ ಬ್ಲಾಕ್‌ನಲ್ಲಿ ರಘು ಅವರು ಕಂಪ್ಯೂಟರ್‌ ಅಂಗಡಿಯನ್ನಿಟ್ಟುಕೊಂಡಿದ್ದು, ಅವರ ಅಂಗಡಿಯಲ್ಲಿ 10 ರಿಂದ 15 ಮಂದಿ ಕೆಲಸಗಾರರಿದ್ದಾರೆ.

ಈ ಹಿಂದೆ ತಾನು ಬಾಡಿಗೆ ಇದ್ದ ಮನೆ ಮಾಲೀಕರಾದ ಮಂಜುನಾಥ್‌ ಅವರ ಇಬ್ಬರು ಮಕ್ಕಳ ಪೈಕಿ ಹೇಮಂತ್‌ನನ್ನು ತಮ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಆದರೆ ಹೇಮಂತ್‌ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಹಾಗಾಗಿ ಆತನನ್ನು ಕೆಲಸದಿಂದ ರಘು ತೆಗೆದಿದ್ದಾರೆ.

ಇದರಿಂದಾಗಿ ಮಂಜುನಾಥ್‌ ಅವರಿಗೆ ರಘು ಮೇಲೆ ಕೋಪ ಬಂದಿದೆ. ಇಷ್ಟಕ್ಕೆ ಸುಮನಾಗದೇ ಮಂಜುನಾಥ್‌, ಮಗ ಹೇಮಂತ್‌ನೊಂದಿಗೆ ಸೇರಿಕೊಂಡು ಇಬ್ಬರೂ ಬುರ್ಖಾ ಧರಿಸಿಕೊಂಡು ರಘು ಅವರ ಅಂಗಡಿ ಬಳಿ ಹೋಗಿ ಬೀಗ ಒಡೆದು ಒಳ ನುಗ್ಗಿ ಕ್ಯಾಶ್‌ ಬಾಕ್ಸ್ ನಲ್ಲಿದ್ದ 2.40 ಲಕ್ಷ ರೂ. ನಗದ, ವಾಡ್ರೋಬ್‌ನಲ್ಲಿದ್ದ 80 ಲಕ್ಷ ಬೆಲೆಬಾಳುವ ಲ್ಯಾಪ್‌ಟಾಪ್‌ ರ್ಯಾಮ್‌ಗಳು, ಎಸ್‌‍ಎಸ್‌‍ಡಿ ಹಾರ್ಡ್‌ ಡಿಸ್ಕ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.

ರಘು ಅವರು ಮಾರನೇ ದಿನ ಎಂದಿನಂತೆ ಅಂಗಡಿ ಬೀಗ ತೆಗೆಯಲು ಬಂದಾಗ ಬಾಗಿಲು ತೆರೆದುಕೊಂಡಿರುವುದು ಗಮನಿಸಿ ಒಳಗೆ ಹೋಗಿ ನೋಡಿದಾಗ ಕಂಪ್ಯೂಟರ್‌ ಬಿಡಿ ಭಾಗಗಳು ಹಾಗೂ ಹಣ ಕಳುವಾಗಿರುವುದು ಕಂಡುಬಂದಿದೆ.ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ನಾಗವಾರದ ಚಾಣಕ್ಯ ಲೇಔಟ್‌ ಮುಖ್ಯ ರಸ್ತೆಯಲ್ಲಿರುವ ಹೋಟೆಲ್‌ವೊಂದರ ಮುಂಭಾಗ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಂದೆಯೊಂದಿಗೆ ಸೇರಿ ಕಳ್ಳತನ ಮಾಡಿರುವುದಾಗಿ ಆತ ಹೇಳಿದ್ದಾನೆ.

ಈ ಮಾಹಿತಿಯಂತೆ ಆತನ ತಂದೆಯನ್ನು ನಾಗವಾರದ ವೃತ್ತದ ಬಳಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಕಂಪ್ಯೂಟರ್‌ನ ಬಿಡಿ ಭಾಗಗಳು ಹಾಗೂ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಗೋವಿಂದಪುರ ಠಾಣೆ ಇನ್ಸ್ ಪೆಕ್ಟರ್‌ ಕಿರಣ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಕೆಲಸಕ್ಕಿದ್ದ ಜ್ಯೂವೆಲರಿ ಪಾಲಿಶಿಂಗ್‌ ಅಂಗಡಿಯಲ್ಲೇ ಕಳ್ಳತನ : 35 ಲಕ್ಷ ಮೌಲ್ಯದ ಬೆಳ್ಳಿ ವಶ

ಬೆಂಗಳೂರು,ಮಾ.18-ಜ್ಯೂವೆಲರಿ ಅಂಗಡಿಯಲ್ಲಿ ಪಾಲಿಶಿಂಗ್‌ ಕೆಲಸಕ್ಕೆ ಸೇರಿಕೊಂಡ ಒಂದೇ ತಿಂಗಳೊಳಗೆ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ್ದ ರಾಜಸ್ಥಾನ ಮೂಲದ ಕೆಲಸಗಾರ ಸೇರಿದಂತೆ ಇಬ್ಬರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿ 35 ಲಕ್ಷ ಮೌಲ್ಯದ 10 ಕೆಜಿ 120 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಟಿ ಸ್ಟ್ರೀಟ್‌ಕ್ರಾಸ್‌‍ನ ಬೆಟ್ಟಪ್ಪ ಲೇನ್‌ನಲ್ಲಿ ಪಿರ್ಯಾದುದಾರರು ಜ್ಯೂವೆಲರಿ ಪಾಲಿಶಿಂಗ್‌ ಅಂಗಡಿ ಇಟ್ಟುಕೊಂಡಿದ್ದು, ಅವರ ಅಂಗಡಿಯಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ನೌಕರ ಅಂಡಿಯಲ್ಲಿದ್ದ 12 ಕೆಜಿ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ರಾಜಸ್ಥಾನದ ಸೆಡ್ವಾ ಪೊಲೀಸ್‌‍ ಠಾಣಾ ವ್ಯಾಪ್ತಿಯ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ನೌಕರ ಸೇರಿದಂತೆ ಆತನ ಜೊತೆಯಲ್ಲಿದ್ದ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವಿಬ್ಬರೂ ಸೇರಿ ಬೆಳ್ಳಿ ವಸ್ತಗಳನ್ನು ಕಳವು ಮಾಡಿರುವುದಾಗಿ ಹೇಳಿದ್ದಾರೆ.

ಆರೋಪಿಗಳಿಂದ 8 ಕೆಜಿ 760 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಕಬ್ಬನ್‌ಪೇಟೆಯಲ್ಲಿರುವ ಜ್ಯೂವೆಲರಿ ಪಾಲಿಶಿಂಗ್‌ ಅಂಗಡಿಯಲ್ಲಿ 1ಕೆಜಿ 360 ಗ್ರಾಂ ಬೆಳ್ಳಿ ವಸ್ತುಗಳನ್ನು ಪಾಲಿಶ್‌ ಮಾಡಲು ನೀಡಿರುವುದಾಗಿ ತಿಳಿಸಿದ್ದು, ಅದರಂತೆ ಪೊಲೀಸರು ಆ ಆಭರಣಗಳನ್ನೂ ಸಹ ವಶಪಡಿಸಿಕೊಂಡಿದ್ದಾರೆ.ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಅಶ್ವತ್‌ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ತಂಡವು ಕೈಗೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಮೂವರು ಮನೆಗಳ್ಳರ ಸೆರೆ: 24.60 ಲಕ್ಷ ಮೌಲ್ಯದ ಮಾಲು ವಶ

ಬೆಂಗಳೂರು,ಮಾ.18- ಮನೆ ಕನ್ನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ನಂದಿನಿ ಲೇಔಟ್‌ ಠಾಣೆ ಪೊಲೀಸರು 24.60 ಲಕ್ಷ ರೂ ಮೌಲ್ಯದ 166 ಗ್ರಾಂ ಚಿನ್ನಾಭರಣ, 480 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡೂ ಪ್ರಕರಣಗಳ ತನಿಖೆ ವೇಳೆ ಸಿಕ್ಕ ಖಚಿತ ಮಾಹಿತಿಯನ್ನು ಕಲೆಹಾಕಿ, ಕನ್ನ ಕಳವಿನಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಠಾಣಾ ಸರಹದ್ದಿನಲ್ಲಿ ನಡೆದಿದ್ದ ಮೂರು ಮನೆಗಳಲ್ಲಿ ಕಳುವಾಗಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಶ್ರೀರಾಂಪುರದ ಜ್ಯೂವೆಲ್ಲರಿ ಅಂಗಡಿಯೊಂದರಲ್ಲಿ ಹಾಗೂ ಕೆ.ಜಿ.ಎಫ್‌ನಲ್ಲಿರುವ ಚಿನ್ನ-ಬೆಳ್ಳಿ ಕೆಲಸ ಮಾಡುವ ಅಂಗಡಿಯಲ್ಲಿ ಮಾರಾಟ ಮಾಡಿರುವುದು ಗೊತ್ತಾಗಿದೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಪ್ರಕರಣದ ಮೂವರು ಆರೋಪಿಗಳ ಬಂಧನದಿಂದ ನಂದಿನಿ ಲೇಔಟ್‌ ಪೊಲೀಸ್‌‍ ಠಾಣೆಯ 5 ಮನೆ ಕನ್ನ ಕಳವು ಪ್ರಕರಣಗಳು ಪತ್ತೆಯಾಗಿದೆ. ಪ್ರಕರಣಗಳ ಕಾರ್ಯಾ ಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್‌‍ ಆಯುಕ್ತರಾದ ಬಿ.ಎಸ್‌‍.ನೇಮಗೌಡ ರವರ ಮಾರ್ಗದರ್ಶನದಲ್ಲಿ, ಯಶವಂತಪುರ ಉಪವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತ ರಾದ ಮೇರಿ ಶೈಲಜಾ ರವರ ನೇತೃತ್ವದಲ್ಲಿ ನಂದಿನಿ ಲೇಔಟ್‌ ಪೊಲೀಸ್‌‍ ಠಾಣೆಯ ಪೊಲೀಸ್‌‍ ಇನ್‌ಸ್ಪೆಕ್ಟರ್‌ ಗಣಪತಿ.ಆರ್‌.ಎಲ್‌ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿದೇಶಗಳಿಂದ ಮಾದಕ ವಸ್ತು ಪಾರ್ಸೆಲ್‌ :ಇಬ್ಬರ ಬಂಧನ

ಬೆಂಗಳೂರು,ಮಾ.18- ಥೈಲ್ಯಾಂಡ್‌ ಹಾಗೂ ಮತ್ತಿತರ ದೇಶಗಳಿಂದ ಬೇರೆ ಬೇರೆ ಹೆಸರು, ವಿಳಾಸಗಳನ್ನು ನೀಡಿ ಮಾದಕ ವಸ್ತುಗಳನ್ನು ಅಂಚೆ ಮೂಲಕ ತರಿಸಿಕೊಳ್ಳುತ್ತಿದ್ದ ಇಬ್ಬರನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.ಕಳೆದ ವಾರ ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ವಿದೇಶದಿಂದ ಬಂದಿದ್ದ ಅನುಮಾನಾಸ್ಪದ ಪಾರ್ಸೆಲ್‌ಗಳನ್ನು ತೆಗೆದು ನೋಡಿದಾಗ ಮಾದಕ ವಸ್ತುಗಳು ಕಂಡು ಬಂದಿವೆ.

ಪಾರ್ಸೆಲ್‌ಗಳಲ್ಲಿದ್ದ 2.865 ಕೆಜಿ ಹೈಡ್ರೋ ಗಾಂಜಾ, 108 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌ ಹಾಗೂ 2 ಗ್ರಾಂ ಕೊಕೇನ್‌ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಲಾದ ದೂರಿನ್ವಯ ಕೆಜಿನಗರ ಪೊಲೀಸ್‌‍ ಠಾಣೆಯಲ್ಲಿ ಎನ್‌ಡಿಪಿಎಸ್‌‍ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಪತ್ತೆ ಮಾಡಲು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್‌‍ ತಂಡವು ಕಾರ್ಯಾಚರಣೆ ಕೈಗೊಂಡು ಆಡುಗೋಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ಇಬ್ಬರು ವಿದೇಶಗಳಿಂದ ಬೇರೆ ಬೇರೆ ಹೆಸರು, ವಿಳಾಸಗಳನ್ನು ನೀಡಿ ಮಾದಕ ವಸ್ತುಗಳನ್ನು ಅಂಚೆ ಮೂಲಕ ತರಿಸಿಕೊಳ್ಳುತ್ತಿದ್ದರು.ಉಳಿದ ಆರೋಪಿಗಳ ಪತ್ತೆಕಾರ್ಯ ಮುಂದುವರೆದಿದೆ.

ಮೂವರು ವಿದೇಶಿ ಪ್ರಜೆಗಳ ಬಂಧನ:

ವೀಸಾ ಅವಧಿ ಮೀರಿ ಅನಧಿಕೃತವಾಗಿ ನಗರದಲ್ಲಿ ವಾಸವಾಗಿದ್ದ ವಿದೇಶಿ ಪ್ರಜೆಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಇನ್ಸ್ ಪೆಕ್ಟರ್‌ ಶಿವರಾಜು ಮತ್ತು ಸಿಬ್ಬಂದಿ ತಂಡವು ಮೂವರು ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿದೆ.ಹುಳಿಮಾವು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನೆಲೆಸಿದ್ದ ನೈಜೀರಿಯಾ ,ಟಾಂಜಾನಿಯಾ ಹಾಗೂ ಜಿಬೌಟಿ ದೇಶದ ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಹುಳಿಮಾವು ಪೊಲೀಸ್‌‍ ಠಾಣೆಗೆ ಹಸ್ತಾಂತರಿಸಲಾಗಿದೆ.

ಗಿಣಿಶಾಸ್ತ್ರ ನೆಪದಲ್ಲಿ ಮೋಸ ಹೋಗಿದ್ದಲ್ಲಿ ದೂರು ನೀಡಿ

ಬೆಂಗಳೂರು,ಮಾ.18- ಗಿಣಿಶಾಸ್ತ್ರ ಹೇಳುವುದಾಗಿ ಪೂಜೆ ನೆಪದಲ್ಲಿ ಯಾರಾದರೂ ಮೋಸ ಹೋಗಿದ್ದಲ್ಲಿ ಸಾರ್ವಜನಿಕರು ಭಾರತೀನಗರ ಪೊಲೀಸ್‌‍ ಠಾಣೆಗೆ ಅಥವಾ ಸಮೀಪದ ಪೊಲೀಸ್‌‍ ಠಾಣೆಗೆ ದೂರು ನೀಡುವಂತೆ ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಮನವಿ ಮಾಡಿದ್ದಾರೆ.ಪೂಜೆ ನೆಪದಲ್ಲಿ ಐಟಿ ಅಧಿಕಾರಿಯೊಬ್ಬರಿಗೆ ಮೋಸ ಮಾಡಿದ ತಮಿಳುನಾಡು ಮೂಲದ ಶೇಖರ್‌ (54) ಎಂಬಾತನನ್ನು ಈಗಾಗಲೇ ಬಂಧಿಸಿ 20.60 ಲಕ್ಷ ರೂ. ಮೌಲ್ಯದ 124 ಗ್ರಾಂ ಚಿನ್ನಾಭರಣ, 796 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಐಟಿ ಅಧಿಕಾರಿಗೆ ಗಿಣಿಶಾಸ್ತ್ರ ಹೇಳುವುದಾಗಿ ಆರೋಪಿ ಶೇಖರ್‌ ನಂಬಿಸಿ ಪೂಜೆ ನೆಪದಲ್ಲಿ ಅವರ ಬಳಿ ಇದ್ದ ಆಭರಣಗಳನ್ನು ತೆಗೆದುಕೊಂಡು ವಾಪಸ್‌‍ ಕೇಳಿದಾಗ ಜೀವ ಬೆದರಿಕೆ ಹಾಕಿದ್ದನು. ಇದೀಗ ಆತನನ್ನು ಬಂಧಿಸಲಾಗಿದೆ. ಈ ರೀತಿ ಗಿಣಿ ಶಾಸ್ತ್ರ, ಪೂಜೆ ನೆಪದಲ್ಲಿ ಹಣ, ಆಭರಣ ಕಳೆದುಕೊಂಡಿದಲ್ಲಿ ಸಾರ್ವಜನಿಕರು ದೂರು ನೀಡಿ, ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಸಾರ್ವಜನಿಕರಿಗೆ ಆಯುಕ್ತರು ಭರವಸೆ ನೀಡಿದ್ದಾರೆ.
ನಂದಿನಿಲೇಔಟ್‌ ಠಾಣೆ ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿರುವ ಬಗ್ಗೆ ಆಯುಕ್ತರು ಮಾಹಿತಿ ನೀಡುತ್ತಾ ಪದೇ ಪದೇ ಮನೆಗಳ್ಳತನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.