ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹೊಸ ಜಾಹೀರಾತು ನೀತಿ ಜಾರಿ

Correspondent/GBA/Bengaluru/SM News Desk

Feb 9, 2026 - 22:35
Feb 9, 2026 - 22:39
 0  2
ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹೊಸ ಜಾಹೀರಾತು ನೀತಿ ಜಾರಿ

ಬೆಂಗಳೂರು.ಫೆ. 9- ಹೊಸ ಜಾಹೀರಾತು ಬೈಲಾಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹೊಸ ಜಾಹೀರಾತು ನೀತಿ ಜಾರಿಗೆ ಬಂದಿದೆ. ನಗರದಲ್ಲಿ ಮತ್ತೆ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಜಾಹೀರಾತು ಉಪ ವಿಧಿ-2024ರ ಕರಡು ಅಧಿಸೂಚನೆಗೆ ಅನುಮತಿ ನೀಡಲಾಗಿದೆ.

ಮಾರ್ಗಸೂಚಿ ದರದ ಮೇಲೆ ಜಾಹಿರಾತು ಶುಲ್ಕ ನಿಗದಿ, ರಸ್ತೆ, ಸರ್ಕಲ್‌ ಮತ್ತು ವಲಯವಾರು ಟೆಂಡರ್‌ ಮೂಲಕ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ನೀಡಿ ಟೆಂಡರ್‌ನಲ್ಲಿ ಭಾಗವಹಿಸಲು ಕಡ್ಡಾಯ 5 ಲಕ್ಷ ರು ಶುಲ್ಕ ಪಾವತಿಸಿ ನೋಂದಣಿ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಬಿಬಿಎಂಪಿಯು ಕರಡು ಜಾಹೀರಾತು ಉಪ ವಿಧಿಯನ್ನು ರೂಪಿಸಲಾಗಿದೆ.

ಕಳೆದ ಜುಲೈನಲ್ಲಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸುವುದಕ್ಕೆ 30 ದಿನ ಕಾಲಾವಕಾಶ ನೀಡಿತ್ತು. ಆ ಬಳಿಕ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಅಗತ್ಯ ತಿದ್ದುಪಡಿ ಮಾಡಿ ಇದೀಗ ಬೈಲಾವನ್ನು ಅಂತಿಮಗೊಳಿಸಲಾಗಿದೆ.

ಈ ನಡುವೆ ಹೈಕೋರ್ಟ್‌ ಜಾಹೀರಾತು ಉಪ ವಿಧಿಯ ಬಗ್ಗೆ ತೆಗೆದುಕೊಂಡ ತೀರ್ಮಾನಗಳನ್ನು ಕೋರ್ಟ್‌ಗೆ ಸಲ್ಲಿಸಿ ಅನುಮೋದನೆ ಪಡೆದು ರಾಜ್ಯಪತ್ರ ಪ್ರಕಟಿಸಬೇಕೆಂದು ನಿರ್ದೇಶನ ನೀಡಿತ್ತು. ಅದರಂತೆ ಕಳೆದ ತಿಂಗಳು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಕೋರ್ಟ್‌ ಅನುಮೋದನೆ ನೀಡಿದೆ.

ಪ್ರತಿ ಜಾಹೀರಾತು ಫಲಕದಿಂದ ಮತ್ತೊಂದು ಜಾಹೀರಾತು ಫಲಕಕ್ಕೆ 100 ಮೀಟರ್‌ ಅಂತರ ಇರಬೇಕು. ಆಟೋ, ಬಸ್‌‍ ಗಳ ಮೇಲೆ ಪ್ರದರ್ಶಿಸುವ ಜಾಹೀರಾತುಗಳಿಗೆ ದರ ನಿಗದಿಪಡಿಸಲಾಗಿದೆ. ವಿಧಾನಸೌಧ- ಹೈಕೋರ್ಟ್‌ ಸೇರಿದಂತೆ ಎ ಝೋನ್‌ಗಳ ಪ್ರದೇಶದಲ್ಲಿ ಜಾಹೀರಾತು ಪ್ರದರ್ಶನ ನಿಷೇಧ ಹೇರಿಕೆ ಸೇರಿದಂತೆ ಮೊದಲಾದ ವಿಚಾರಗಳು ಜಾಹೀರಾತು ಬೈಲಾದಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಹೊಸ ನೀತಿಯಲ್ಲಿ ರಸ್ತೆ, ಸರ್ಕಲ್‌ ಹಾಗೂ ವಲಯವಾರು ಮಾದರಿಯಲ್ಲಿ ಟೆಂಡರ್‌ ನಡೆಸುವುದಕ್ಕೆ ಅವಕಾಶ ಕೊಡಲಾಗಿದೆ.ರಸ್ತೆಯ ಅಗಲ, ಸರ್ಕಲ್‌ ಗಾತ್ರಕ್ಕೆ ಅನುಗುಣ ಜಾಹೀರಾತು ಫಲಕ ಅಳವಡಿಕೆಗೆ ತೀರ್ಮಾನಿಸಲಾಗಿದೆ. ಇನ್ನೂ ಜಾಹೀರಾತು ಪ್ರದರ್ಶನಕ್ಕೆ ಶುಲ್ಕ ನಿಗದಿ ಪಡಿಸುವುದಕ್ಕೆ ಮಾರ್ಗಸೂಚಿ ದರ ಆಧರಿಸಲಾಗುತ್ತದೆ. ಇದರಿಂದ ಹೆಚ್ಚಿನ ಮಾರ್ಗಸೂಚಿದ ದರ ಇರುವ ಪ್ರದೇಶದಲ್ಲಿ ಜಾಹೀರಾತು ಪ್ರದರ್ಶನದ ಶುಲ್ಕ ಪ್ರಮಾಣ ಹೆಚ್ಚಾಗಲಿದೆ. ಕಡಿಮೆ ಇರುವ ಕಡೆ ದರ ಕಡಿಮೆ ಆಗಲಿದೆ. ಹೆಚ್ಚಿನ ಮೊತ್ತ ಬಿಡ್‌ ಮಾಡಿದವರಿಗೆ ಗುತ್ತಿಗೆ ದೊರೆಯಲಿದೆ.

ನೂತನ ಜಾಹೀರಾತು ನೀತಿಯಲ್ಲಿ ಕಡ್ಡಾಯವಾಗಿ ಪರಿಸರ ಸ್ನೇಹಿ ಇರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು. ಇಲ್ಲವಾದರೆ, ಟೆಂಡರ್‌ ರದ್ದು ಪಡಿಸುವ ಅಧಿಕಾರವನ್ನು ನಗರಪಾಲಿಕೆ ಹೊಂದಿರಲಿದೆ. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಜಾಹಿರಾತು ನೀಡಲು ಅವಕಾಶ ನೀಡಲಾಗುವುದು. ನಗರಪಾಲಿಕೆಗೆ ತೆರಿಗೆ ನೀಡಿ ಖಾಸಗಿ ಕಟ್ಟಡಗಳು ಜಾಹಿರಾತು ಅಳವಡಿಕೆಗೆ ಬಾಡಿಗೆ ನೀಡಬಹುದಾಗಿದೆ.

ಹೊಸ ಜಾಹೀರಾತು ನೀತಿ ಜಾರಿಯಿಂದ ಜಿಬಿಎಗೆ ವಾರ್ಷಿಕವಾಗಿ ಒಂದು ಸಾವಿರ ಕೋಟಿ ರೂ.ಗಳ ಆದಾಯ ನಿರೀಕ್ಷೆ ಮಾಡಲಾಗಿದೆ. ಇದೀಗ ಜಿಬಿಎ ವ್ಯಾಪ್ತಿ ದೊಡ್ಡಾಗಿದೆ. ವಾಣಿಜ್ಯ ವಹಿವಾಟು ಸಹ ಹೆಚ್ಚಾಗಿದೆ. ಹಾಗಾಗಿ, ಒಂದು ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಲಿದೆ ಎಂದು ಜಿಬಿಎ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಮಾರ ಕೃಪ ರಸ್ತೆಯಲ್ಲಿ (ವಿಂಡ್ಸರ್‌ ಜಂಕ್ಷನ್‌ನಿಂದ ಶಿವಾನಂದ ವೃತ್ತದವರೆಗೆ), ರಾಜಭವನ ರಸ್ತೆಯಲ್ಲಿ (ಹೈಗ್ರೌಂಡ್‌್ಸನಿಂದ ಮಿನ್‌್ಸ ಸ್ಕ್ಯಾರ್‌ವರೆಗೆ), ಸ್ಯಾಂಕಿ ರಸ್ತೆಯಲ್ಲಿ (ಹೈ ಗ್ರೌಂಡ್‌್ಸನಿಂದ ವಿಂಡ್ಸರ್‌ ಸಿಗ್ನಲ್‌ವರೆಗೆ), ಅಂಬೇಡ್ಕರ್‌ ವೀಧಿ (ಕೆಆರ್‌ ವೃತ್ತದಿಂದ ಇನ್‌ಫೆಂಟ್ರಿ ರಸ್ತೆವರೆಗೆ), ಪೋಸ್ಟ್‌ ಆಪೀಸ್‌‍ ರಸ್ತೆ (ಕೆಆರ್‌ ಜಂಕ್ಷನ್‌ನಿಂದ ಎಸ್‌‍ಬಿಐ ಜಂಕ್ಷನ್‌), ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ (ಶೇಷಾದ್ರಿ ರಸ್ತೆ), ಕೆಆರ್‌ ವೃತ್ತ, ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ಬಾಗ್‌‍ ಸುತ್ತಮುತ್ತ, ನೃಪತುಂಗ ರಸ್ತೆ (ಕೆಆರ್‌ ವೃತ್ತದಿಂದ ಹಡ್ಸನ್‌ ವೃತ್ತ) ಮತ್ತು ಅರಮನೆ ರಸ್ತೆ (ಎಸ್‌‍ಬಿಐ ವೃತ್ತದಿಂದ ಚಾಲುಕ್ಯ ವೃತ್ತ)ದ ವರೆಗೆ ಜಾಹೀರಾತು ಪ್ರದರ್ಶನ ನಿಷೇಧಿಸಲಾಗಿದೆ.

ಆದರೆ, ಹೊಸ ನೀತಿಯು ಮೆಟ್ರೋ ಪಿಲ್ಲರ್‌ಗಳು, ಬಸ್‌‍ಗಳು, ಮೆಟ್ರೋ ರೈಲುಗಳು, ಟ್ಯಾಕ್ಸಿಗಳು, ಆಟೋಗಳು ಮತ್ತು ಬಸ್‌‍ ಶೆಲ್ಟರ್‌ಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಅನುಮತಿ ನೀಡಲಾಗಿದೆ.ಜಾಹೀರಾತು ದರ;
3,000 ಚದುರ ಅಡಿಗಿಂತ ಕಡಿಮೆ ಇರುವ ಪ್ರದೇಶದಲ್ಲಿ ಅಡಿಗೆ 45 ರೂ. ದರ ನಿಗದಿ ಮಾಡಲಾಗಿದೆ.
3,000 ದಿಂದ 5,000 ಚದುರಡಿಗಿಂತ ಕಡಿಮೆ ಇದ್ದರೆ ಅಡಿಗೆ 55 ರೂ.
5,000 ದಿಂದ 10,000 ಚದುರಡಿಗಿಂತ ಕಡಿಮೆ ಇದ್ದರೆ, 65 ರೂ., 10,000 ದಿಂದ 20,000 ಅಡಿ ಜಾಗಕ್ಕೆ 70 ರೂ, 20,000ದಿಂದ 50,000 ಚದುರಡಿಗಿಂತ ಕಡಿಮೆ ಇದ್ದರೆ ಅಡಿಗೆ 80 ರೂ. ನಿಗದಿಪಡಿಸಲಾಗಿದೆ.
50,000 ದಿಂದ 1 ಲಕ್ಷ ಚದುರಡಿಗಿಂತ ಕಡಿಮೆ ಇದ್ದರೆ, 90ರೂ. ಒಂದು ಲಕ್ಷ ದಿಂದ 2 ಲಕ್ಷ ಚದುರಡಿ ಒಳಗಿದ್ದರೆ 100 ರೂ. ಹಾಗೂ 2 ಲಕ್ಷ ಕ್ಕಿಂತ ಹೆಚ್ಚು ಅಡಿಯ ಜಾಹೀರಾತು ಪ್ರದರ್ಶನಕ್ಕೆ 110 ರೂ. ಫಿಕ್‌್ಸ ಮಾಡಲಾಗಿದೆ.
ಖಾಸಗಿ ಮತ್ತು ಸಾರ್ವಜನಿಕ ಬಸ್‌‍ಗಳ ಮೇಲೆ 10 ಅಡಿ ಜಾಹೀರಾತು ಪ್ರರ್ದಶಿಸಬಹುದು. ಪ್ರತಿ ಚದರಡಿಗೆ 50 ರೂ. ಅಥವಾ ಮಾಸಿಕ 500 ರೂ. ಮೆಟ್ರೋ ರೈಲು ಜಾಹೀರಾತಿನ ಪ್ರತಿ ಚದರಡಿಗೆ 50 ರೂ ಅಥವಾ ಇಡೀ ಬೋಗಿಗೆ ಮಾಸಿಕ 750 ರೂ. ನಿಗದಿ ಮಾಡಲಾಗಿದೆ.
ವಿತರಣಾ ವಾಹನ ಮತ್ತು ಸೇವಾ ವಾಹನಗಳ ಮೇಲೆ 6 ಅಡಿ ಜಾಹೀರಾತು ಪ್ರರ್ದಶಿಸಬಹುದು. ಪ್ರತಿ ಚದರಡಿಗೆ 75 ರೂ. ಅಥವಾ ಮಾಸಿಕ 750 ರೂ. ಟ್ಯಾಕ್ಸಿ, ಆಟೋ, ಸಾರ್ವಜನಿಕ ಸಂಚಾರಿ ವಾಹನದಲ್ಲಿ 6 ಅಡಿ ಜಾಹೀರಾತು ಪ್ರರ್ದಶಿಸಬಹುದು. ಪ್ರತಿ ಚದರಡಿಗೆ ಮಾಸಿಕ 50 ರೂ ಅಥವಾ ಮಾಸಿಕ 500 ರೂ. ದರ ನೀಡಬೇಕಾಗುತ್ತದೆ.