ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ ಎಂದ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್
Correspondent/Begnaluru/Political/SM News Desk
ಬೆಂಗಳೂರು, ಏ.2 : ಕೋರಮಂಗಲದ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪದಕ ಪುರಸ್ಕೃತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಗೃಹಸಚಿವರು ದೇಶವನ್ನು ನಕ್ಸಲ್ ಮುಕ್ತ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಮೊದಲು ನಕ್ಸಲ್ ಮುಕ್ತ ರಾಜ್ಯ ಮಾಡಿದ್ದು ನಾವು ಎಂದರು.ಬಹಳ ವರ್ಷಗಳ ಹಿಂದೆಯೇ ಆ್ಯಂಟಿ ನಕ್ಸಲ್ ಫೋರ್ಸ್ ಸ್ಥಾಪಿಸುವ ಮೂಲಕ ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಿದ್ದೇವೆ ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಹೇಳಿದರು.
ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯಂತ ಉತ್ತಮವಾದ ಪೊಲೀಸ್ ವ್ಯವಸ್ಥೆ ಎಂಬ ಬಿರುದಿಗೆ ಪಾತ್ರವಾಗಿದೆ. 1965ರ ಏ.2ರಂದು ಪೊಲೀಸ್ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ರಾಜ್ಯ ಪೊಲೀಸರನ್ನು ಒಟ್ಟುಗೂಡಿಸಿ, ಶಿಸ್ತಿನಿಂದ ನಡೆಸುವ ಸಂದರ್ಭವನ್ನು ಪೊಲೀಸ್ ಧ್ವಜ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.ರಾಜ್ಯದಲ್ಲಿ ಶಾಂತಿ, ನೆಮದಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂಡಿಯಾ ಜಸ್ಟೀಸ್ ವರದಿ ಪ್ರಕಾರ ದೇಶದಲ್ಲಿ ನೊಂದವರಿಗೆ ನ್ಯಾಯ ನೀಡುವುದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂಬುದು ಗೊತ್ತಾಗಿದೆ. ವಿಶೇಷವಾಗಿ ನ್ಯಾಯ ಒದಗಿಸುವುದರಲ್ಲಿ ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಇಲಾಖೆಯು ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದ 3ನೇ ಅತ್ಯುತ್ತಮ ಪೊಲೀಸ್ ಠಾಣೆ ಎಂದು ಗುರುತಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು, ಕವಿತಾಳ ಪೊಲೀಸ್ ಠಾಣೆಯಂತೆಯೇ ಅತ್ಯುತ್ತಮ ಪೊಲೀಸ್ ಠಾಣೆಗಳಾಗಬೇಕೆಂದು ಸರ್ಕಾರ ಬಯಸುತ್ತದೆ ಎಂದರು.ಪೊಲೀಸ್ ಇಲಾಖೆಯು ಪ್ರತಿನಿತ್ಯ ಸವಾಲುಗಳನ್ನು ಎದುರಿಸುತ್ತದೆ. ಸವಾಲುಗಳ ಮಧ್ಯೆ ಕಳೆದ ಮೂರು ವರ್ಷಗಳಿಂದ ನಮ ಸರ್ಕಾರ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಶಾಂತಿ ಕಾಪಾಡುವುದರಲ್ಲಿ ಯಶಸ್ವಿಯಾಗಿದೆ. ರಾಜ್ಯಕ್ಕೆ ಬಂಡಾವಾಳ ಹೂಡಿಕೆಗೆ ಬರುವ ಜನ ಶಾಂತಿ-ನೆಮದಿ ಬಯಸುತ್ತಾರೆ. ರಾಜ್ಯದಲ್ಲಿ ಸೌಹಾರ್ದಯುತ ವಾತಾವರಣ ಸೃಷ್ಟಿ ಮಾಡುವುದರಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಕರ್ತವ್ಯದ ವೇಳೆ ಇಲಾಖೆಗೆ ಚ್ಯುತಿ ಬಾರದಂತೆ ಅತ್ಯಂತ ಕ್ಷಿಪ್ರವಾಗಿ ಅಪರಾಧಗಳನ್ನು ಪತ್ತೆಹಚ್ಚಿವುದನ್ನು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತೋರಿಸಿಕೊಟ್ಟಿದ್ದಾರೆ. ಕಾರ್ಯದಕ್ಷತೆಗೆ, ಸಾಮರ್ಥ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು.ರಾಜ್ಯದಲ್ಲಿ ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ನಮ ಸರ್ಕಾರ ಮುಂದಾಗಿದ್ದು, ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಪತ್ತೆಹಚ್ಚುವ ಮೂಲಕ ದಂಧೆಯಲ್ಲಿ ತೊಡಗಿದ ಅನೇಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಸೈಬರ್ ಕ್ರೈಂ ಹಾವಳಿ ಹೆಚ್ಚಾಗುತ್ತಿದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕವೂ ಸೈಬರ್ ಕಮಾಂಡ್ ಯೂನಿಟ್ ಸ್ಥಾಪಿಸಿ, ಡಿಜಿ ಶ್ರೇಣಿಯ ಅಧಿಕಾರಿಯನ್ನು ನೇಮಿಸಿದೆ. ಸೈಬರ್ ಕಮಾಂಡ್ ಯೂನಿಟ್‌ಗೆ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಸೈಬರ್ ಅಪರಾಧಗಳನ್ನು ಕಡಿಮೆ ಮಾಡುವುದರಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.ಆಧುನಿಕತೆ ಸವಾಲುಗಳನ್ನು ಎದುರಿಸಲು ಎಲ್ಲ ಹಂತದಲ್ಲಿಯೂ ತರಬೇತಿ ಪಡೆಯುವ ಮೂಲಕ ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ, ನೇಮಕಾತಿಯಲ್ಲಿ ಆಧುನಿಕತೆಯನ್ನು ಬಳಸಿಕೊಳ್ಳಲಾಗುವುದು.
8 ಸಾವಿರ ಕಾನ್‌ಸ್ಟೇಬಲ್, 600 ಪಿಎಸ್‌ಐ ಹುದ್ದೆ ನೇಮಕಾತಿಗೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅನುವು ಮಾಡಿಕೊಟ್ಟಿದ್ದಾರೆ. ಶಾಶ್ವತವಾದ ಪೊಲೀಸ್ ಸಹಾಯ ಸೇವೆಗಳ ನೇಮಕಾತಿ ಮಂಡಳಿಯನ್ನು ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
